ಮೆಣಸು ತುಂಬಿದ ಚೀಲಗಳಲ್ಲಿ ನಿಷೇಧಿತ ಪಾನ್‌ಮಸಾಲ, ವಿದೇಶಿ ಮದ್ಯ ಸಾಗಾಟ: ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ

ಕಾಸರಗೋಡು, ಮಾ.27: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮದ್ಯ ಮತ್ತು ತಂಬಾಕು ಉತ್ಪನ್ನಗಳ ಸಹಿತ ಇಬ್ಬರನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ಪಿ.ನಾರಾಯಣ( 53) ಮತ್ತು ಸಿ.ವಿ.ರಾಘವನ್(66) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 12 ಬಾಟಲಿ ವಿದೇಶಿ ಮದ್ಯ ಮತ್ತು 240 ಪ್ಯಾಕೆಟ್ ನಿಷೇಧಿತ ಪಾನ್ ಮಸಾಲ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೆಣಸು ತುಂಬಿದ್ದ ಗೋಣಿ ಚೀಲಗಳಲ್ಲಿ ಇವುಗಳನ್ನು ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದರು. ಮಂಗಳೂರಿನಿಂದ ಚೆನ್ನೈಗೆ ತೆರಳುವ ರೈಲಿನಲ್ಲಿ ಚೆರ್ವತ್ತೂರಿನಲ್ಲಿ ಬಂದಿಳಿದ ಇವರ ಬಗ್ಗೆ ಸಂಶಯಗೊಂಡ ಪೊಲೀಸರು ಗೋಣಿ ಚೀಲವನ್ನು ತಪಾಸಣೆಗೊಳಪಡಿಸಿದಾಗ ಈ ಅಕ್ರಮ ದಂಧೆ ಬೆಳಕಿಗೆ ಬಂದಿದೆ ಮಂಗಳೂರಿನಿಂದ ತಂದು ಇಲ್ಲಿ ಅಕ್ರಮ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Next Story





