ದಯವಿಟ್ಟು ಟವೆಲ್ ಬಿಟ್ಟು ಹೋಗಿ! ವಿಶ್ವಕಪ್ ಕ್ರಿಕೆಟ್ ತಾರೆಯರಿಗೆ ಐಸಿಸಿ ಮನವಿ

ಹೊಸದಿಲ್ಲಿ, ಮಾ.27: ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಎಲ್ಲ ತಂಡಗಳ ಆಟಗಾರರು ಡ್ರೆಸ್ಸಿಂಗ್ ರೂಮ್‌ನಲ್ಲಿ ಬಳಸಿದ ಟವಲ್‌ನ್ನು ಮನೆಗೆ ಒಯ್ಯದಂತೆ ವಿನಂತಿಸಬೇಕಾದ ಪರಿಸ್ಥಿತಿ ಐಸಿಸಿಗೆ ಎದುರಾಗಿದೆ.
ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿ ಅತ್ಯಂತ ಶ್ರೀಮಂತ ಟೂರ್ನಿಯಾಗಿದ್ದು, ಒಟ್ಟು ಬಹುಮಾನ ಮೊತ್ತ 38 ಕೋಟಿ ರೂ. ಆಗಿದೆ. ವಿಜೇತ ತಂಡ 11 ಕೋಟಿ ರೂ. ಪಡೆಯಲಿದೆ. ಆಟಗಾರರಿಗೂ ಪ್ರತ್ಯೇಕ ವೇತನವಿದೆ. ಇಷ್ಟೊಂದು ವ್ಯವಸ್ಥೆಯ ನಡುವೆಯೂ ಡ್ರೆಸ್ಸಿಂಗ್ ರೂಮ್ ಇಡಲಾಗಿರುವ ಬ್ರಾಂಡಡ್ ಟವಲ್‌ಗಳು ಕಾಣೆಯಾಗುತ್ತಿರುವುದು ಐಸಿಸಿಗೆ ಚಿಂತೆಯಾಗಿ ಕಾಡಲಾರಂಭಿಸಿದೆ. ಟ್ವೆಂಟಿ-20 ಹ್ಯಾಂಡ್‌ಬುಕ್‌ನಲ್ಲಿ ಆಟಗಾರರಿಗೆ ನೀಡಲಾಗಿರುವ ಸೂಚನೆಯನ್ನು ಆಟಗಾರರಿಗೆ ಓದಿ ಹೇಳಬೇಕಾದ ಪರಿಸ್ಥಿತಿ ಐಸಿಸಿ ಎದುರಿಸುತ್ತಿದೆ.
‘ತಂಡದ ಬಳಕೆಗೆ ಬ್ರಾಂಡ್ ಟವಲ್ಸ್‌ಗಳನ್ನು ಎಲ್ಲ ಡ್ರೆಸ್ಸಿಂಗ್‌ರೂಮ್‌ನಲ್ಲಿ ಇಡಲಾಗಿದೆ. ತಂಡಗಳು ಟವಲ್ ಬಳಕೆಯ ನಂತರ ಅವುಗಳನ್ನು ಅಲ್ಲೇ ಇಡಬೇಕು. ಮನೆಗೆ ಕೊಂಡೊಯ್ಯುವಂತಿಲ್ಲ. ಈ ಟವಲ್‌ಗಳನ್ನು ಲಾಂಡ್ರಿಗೆ ನೀಡಿ ಮರು ಬಳಕೆ ಮಾಡಲಾಗುತ್ತದೆ’ ಎಂದು ಎಲ್ಲ ತಂಡಗಳು ಹಾಗೂ ಆಟಗಾರರು, ಪಂದ್ಯದ ಅಧಿಕಾರಿಗಳಿಗೆ ಐಸಿಸಿ ನೀಡಿರುವ ಟ್ವೆಂಟಿ-20 ಹ್ಯಾಂಡ್‌ಬುಕ್‌ನ ಟವಲ್ ವಿಭಾಗದಲ್ಲಿ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ.
ಐಸಿಸಿಯು ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ನಿತ್ಯ ಬಳಕೆಗೆ ಪ್ರತ್ಯೇಕ ಟವಲ್‌ಗಳನ್ನು ನೀಡುತ್ತಿದೆ. ಡ್ರೆಸ್ಸಿಂಗ್ ರೂಮ್ ಬಳಕೆಗೆ ಸೀಮಿತವಾಗಿರುವ ಈ ಟವಲ್‌ನ್ನು ಕೆಲವು ಆಟಗಾರರು ಬೇರೆ ಬೇರೆ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಕೆಲವು ಆಟಗಾರರು ಐಸ್ ಕ್ಯೂಬ್‌ನ್ನು ಡ್ರೆಸ್ಸಿಂಗ್ ರೂಮ್‌ನಿಂದ ಹೊಟೇಲ್ ರೂಮ್‌ಗೆ ಕೊಂಡೊಯ್ಯಲು ಈ ಟವಲ್‌ನ್ನು ಬಳಸುತ್ತಿದ್ದಾರೆ. ಇನ್ನು ಕೆಲವು ಆಟಗಾರರು ಬ್ಯಾಟಿಂಗ್‌ನ ವೇಳೆ ಸೆಖೆಯಿಂದ ಪಾರಾಗಲು ಈ ಟವಲ್‌ನ್ನು ಕೊರಳಿಗೆ ಸುತ್ತಿಕೊಂಡಿರುತ್ತಾರೆ.







