ನೆತ್ತೋಡಿ: ಹಳೆ ವಿದ್ಯಾರ್ಥಿಗಳಿಗೆ, ಶಾಲಾ ಮಕ್ಕಳ ಪೋಷಕರ ಕ್ರೀಡಾಕೂಟ

ಮೂಡುಬಿದಿರೆ, ಮಾ.27: ಇಲ್ಲಿನ ನೆತ್ತೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಂಗವಾಗಿ ಹಳೆ ವಿದ್ಯಾರ್ಥಿಗಳಿಗೆ ಮತ್ತು ಶಾಲಾ ಮಕ್ಕಳ ಪೋಷಕರಿಗೆ ಕ್ರೀಡಾಕೂಟವು ರವಿವಾರ ಶಾಲಾ ಆವರಣದಲ್ಲಿ ನಡೆಯಿತು. ಕ್ರೀಡಾಕೂಟವನ್ನು ಪುರಸಭಾ ಸದಸ್ಯೆ ಹರಿಣಾಕ್ಷಿ ಎಸ್.ಸುವರ್ಣ ಉದ್ಘಾಟಿಸಿ, ನಮ್ಮ ಮಾನಸಿಕ ಆರೋಗ್ಯ ಮತ್ತು ದೈಹಿಕ ಶಕ್ತಿಯನ್ನು ಕ್ರೀಡೆಯು ವೃದ್ಧಿಸುತ್ತದೆ. ನಮಗೆರಗುವ ಕಷ್ಟಗಳನ್ನು ಎದುರಿಸುವಲ್ಲಿ ಕ್ರೀಡೆಯು ಸಹಕಾರಿಯಾಗಿದೆ. ಹೆಣ್ಣು ಗಂಡೆಂಬ ಭೇದವಿಲ್ಲದೆ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾನಸಿಕ ಸ್ಥೈರ್ಯವನ್ನು ಹೊಂದಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಲಾ ಮುಖ್ಯಶಿಕ್ಷಕಿ ಅನಿತಾ ಎಂ.ಎ., ಸಹಶಿಕ್ಷಕಿ ವನಿತಾ ಸೆಲಿನ್ ಡಿಸಿಲ್ವ, ಶ್ರೀಧರ್ ಕೆಮ್ಮಾರ್, ಸದಾನಂದ ಸುವರ್ಣ, ಸಂಪತ್ ಕುಮಾರ್ ಉಪಸ್ಥಿತರಿದ್ದರು.
ನೆತ್ತೋಡಿ ಫ್ರೆಂಡ್ಸ್ ಅಧ್ಯಕ್ಷ ಸುರೇಶ್ ಕುಮಾರ್ ಸ್ವಾಗತಿಸಿದರು. ವಿಜಯ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಕೀರ್ತಿ ಸುವರ್ಣ ವಂದಿಸಿದರು. ಲಕ್ಕಿ ಗೇಮ್ಸ್, ಗುಂಡೆಸೆತ ಸಹಿತ ಇತರ ಕ್ರೀಡಾ ಸ್ಪರ್ಧೆಗಳು ನಡೆದವು.







