ಉತ್ತರಾಖಂಡ್‌ನಲ್ಲಿ ರಾಷ್ಟ್ರಪತಿ ಆಡಳಿತ

ಹೊಸದಿಲ್ಲಿ, ಮಾ.27: ಆಳುವ ಕಾಂಗ್ರೆಸ್‌ನೊಳಗಿನ ಬಂಡಾಯದಿಂದ ಉದ್ಭವವಾಗಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆಡಳಿತವು ಕುಸಿದಿದೆಯೆಂಬ ನೆಲೆಯಲ್ಲಿ ಕೇಂದ್ರದ ವಿವಾದಿತ ನಿರ್ಧಾರವೊಂದರನ್ವಯ ಉತ್ತರಾಖಂಡ್‌ನಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಲಾಗಿದೆ.
ಹರೀಶ್ ರಾವತ್ ನೇತೃತ್ವದ ಸರಕಾರವನ್ನು ವಜಾಗೊಳಿಸುವ, ಸಂವಿಧಾನದ 356ನೆ ವಿಧಿಯನ್ವಯದ ಘೊಷಣೆಯೊಂದಕ್ಕೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಇಂದು ಸಹಿ ಹಾಕಿದ್ದಾರೆ. ಕೇಂದ್ರ ಸಂಪುಟದ ಶಿಫಾರಸಿನಂತೆ ಉತ್ತರಾಖಂಡ ವಿಧಾನಸಭೆಯನ್ನು ಅನಿರ್ದಿಷ್ಟಾವದಿ ಅಮಾನತಿನಲ್ಲಿಡಲಾಗಿದೆ.
ಕೆಂದ್ರ ಸಂಪುಟವು ನಿನ್ನೆ ರಾತ್ರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ತುರ್ತು ಸಭೆಯೊಂದನ್ನು ನಡೆಸಿತ್ತು. ಈ ಉದ್ದೇಶಕ್ಕಾಗಿ ಮೋದಿ ತನ್ನ ಅಸ್ಸಾಂ ಪ್ರವಾಸವನ್ನು ಮೊಟಕುಗೊಳಿಸಿ ಹೊಸದಿಲ್ಲಿಗೆ ಆಗಮಿಸಿದ್ದರು.
ಸಂಪುಟವು, ರಾಜ್ಯಪಾಲ ಕೆ.ಕೆ.ಪೌಲ್ ಕಳುಹಿಸಿದ್ದ ಅನೇಕ ವರದಿಗಳನ್ನು ಪರಿಶೀಲಿಸಿತು. ಉತ್ತಾರಖಂಡದ ರಾಜಕೀಯ ಸ್ಥಿತಿ ಶಿಥಲವಾಗಿದೆ. ನಾಳೆ ನಡೆಯಲಿರುವ ಬಲಾ ಬಲ ಪರೀಕ್ಷೆಯ ವೇಳೆ ವಿಧಾನಸಭೆಯಲ್ಲಿ ಕೋಲಾಹಲ ಉಂಟಾಗುವ ಸಾಧ್ಯತೆಯಿದೆಯೆಂದು ಅವರು ವರದಿ ನೀಡಿದ್ದರು.
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ನಿನ್ನೆ ತಡರಾತ್ರಿ ಸಂಪುಟ್ದ ಶಿಫಾರಸಿನ ಔಚಿತ್ಯದ ಕುರಿತು ರಾಷ್ಟ್ರಪತಿಗೆ ಮನವರಿಕೆ ಮಾಡಿದ್ದರೆನ್ನಲಾಗಿದೆ.
ರಾವತ್ ಸರಕಾರದ ಉಚ್ಚಾಟನೆಯಿಂದಾಗಿ ನಾಳಿನ ಬಲ ಪರೀಕ್ಷೆ ಫಲ ಹೀನವಾಗಿದೆ.
ವಿಧಾನಸಭಾಧ್ಯಕ್ಷ ಗೋವಿಂದ ಸಿಂಗ್ ಕುಂಜ್ವಾಲ್ 9 ಮಂದಿ ಬಂಡಕೋರ ಕಾಂಗ್ರೆಸ್ ಶಾಸಕರನ್ನು ಅಮಾನ್ಯಗೊಳಿಸಿದ್ದಾರೆ. ಅದರಿಂದಾಗಿ ರಾವತ್‌ಗೆ ವಿಶ್ವಾಸ ಮತ ಗೆಲ್ಲಲು ಸಾಧ್ಯವಾಗಲಿದೆಯೆಂಬ ವರದಿಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.
ರಾಷ್ಟ್ರಪತಿ ಆಳ್ವಿಕೆಯ ನಿರ್ಧಾರವನ್ನು ಕಾಂಗ್ರೆಸ್ ಖಂಡಿಸಿದ್ದು, ಇದು ಪ್ರಜಾಪ್ರಭುತ್ವದ ಕೊಲೆಯಾಗಿದೆ ಹಾಗೂ ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲವೆಂಬುದನ್ನು ತೋರಿಸಿದೆಯೆಂದು ಆರೋಪಿಸಿದೆ.







