‘ಯುವರಾಜ್‌ಗೆ ಧೋನಿ ಬೌಲಿಂಗ್ ಅವಕಾಶ ನೀಡುತ್ತಿಲ್ಲ’ ಯುವಿ ತಂದೆ ಯೋಗರಾಜ್ ಸಿಂಗ್ ಆಕ್ರೋಶ

ಹೊಸದಿಲ್ಲಿ, ಮಾ.27: ‘‘ಪ್ರಸ್ತುತ ಟ್ವೆಂಟಿ-20 ವಿಶ್ವಕಪ್‌ನಲ್ಲಿ ತನ್ನ ಮಗನಿಗೆ ಎಂಎಸ್ ಧೋನಿ ಬೌಲಿಂಗ್ ಮಾಡುವ ಅವಕಾಶ ನೀಡುತ್ತಿಲ್ಲ’’ಎಂದು ಭಾರತದ ನಾಯಕನ ವಿರುದ್ಧ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಕಿಡಿಕಾರಿದ್ದಾರೆ.
‘‘ಟೀಮ್ ಇಂಡಿಯಾದಲ್ಲಿ ನನ್ನ ಮಗನನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿದೆ. ಆತನನ್ನು ಏಕೆ ಭಾರತೀಯ ತಂಡದಿಂದ ಕೈ ಬಿಡಲಾಗುತ್ತಿದೆ. 2014ರ ಟ್ವೆಂಟಿ-20 ವಿಶ್ವಕಪ್ ಫೈನಲ್ ಪಂದ್ಯವೇ ಇದಕ್ಕೆ ಕಾರಣವೇ?ದೇಶದಲ್ಲಿ 10,000 ಅಧಿಕ ಕ್ರಿಕೆಟಿಗರು ಆಡುತ್ತಿದ್ದಾರೆ. ಅವರಿಗೆ ಎಲ್ಲ ಸಮಯದಲ್ಲೂ ಒಂದೇ ರೀತಿ ಆಡಲು ಸಾಧ್ಯವಾಗುವುದಿಲ್ಲ. ನೀವೇಕೆ ತಾರತಮ್ಯ ನೀತಿ ಅನುಸರಿಸುತ್ತಿದ್ದೀರಿ’’ ಎಂದು ಯೋಗರಾಜ್ ಪ್ರಶ್ನಿಸಿದ್ದಾರೆ.
‘‘ನನ್ನ ಮಗ ಎರಡು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದು ದೊಡ್ಡ ಸಾಧನೆ. ನಾಯಕ ಆಟಗಾರನಿಂದ ಹೆಚ್ಚು ನಿರೀಕ್ಷಿಸುವುದು ಸಹಜ. ಯುವಿಯನ್ನು ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಒಮ್ಮ್ಮೆಲೇ 7ನೆ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಿದ್ದೇಕೆ. ತಂಡದೊಳಗೆ ಏನು ನಡೆಯುತ್ತಿದೆ. ಯುವರಾಜ್ ಬ್ಯಾಟಿಂಗ್ ಕ್ರಮಾಂಕವನ್ನು ಬದಲಿಸಲಾಗುತ್ತಿದೆ. ಧೋನಿಗೆ ಯುವಿ ಮೇಲೆ ಒಲವಿಲ್ಲದೇ ಇದ್ದರೆ ಈ ಬಗ್ಗೆ ಆಯ್ಕೆಗಾರರಲ್ಲಿ ದೂರು ನೀಡಲಿ. ವೈಯಕ್ತಿಕವಾಗಿ ದಾಳಿ ನಡೆಸುವುದು ಸರಿಯಲ್ಲ. 2011ರ ವಿಶ್ವಕಪ್‌ನಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದ ಯುವಿಗೆ ಪ್ರಸ್ತುತ ಟೂರ್ನಿಯಲ್ಲಿ ಬೌಲಿಂಗ್ ಮಾಡುವ ಅವಕಾಶವನ್ನೇ ನೀಡದಿರುವುದು ತಪ್ಪು’’ಎಂದು ಯೋಗರಾಜ್ ಸಿಂಗ್ ತಿಳಿಸಿದರು.







