ಐಸಿಸಿ ಟ್ವೆಂಟಿ-20 ವಿಶ್ವಕಪ್ ವೈಫಲ್ಯಕ್ಕೆ ಐಸಿಸಿ ಕಾರಣ: ಮುರ್ತಝ
ಢಾಕಾ, ಮಾ.27: ‘‘ಬಾಂಗ್ಲಾದೇಶ ಟ್ವೆಂಟಿ-20 ವಿಶ್ವಕಪ್‌ನಿಂದ ಬೇಗನೆ ಹೊರಬೀಳಲು ಶಂಕಾಸ್ಪದ ಬೌಲಿಂಗ್ ಆರೋಪದಲ್ಲಿ ತಂಡದ ಇಬ್ಬರು ಪ್ರಮುಖ ಬೌಲರ್‌ಗಳನ್ನು ಐಸಿಸಿ ಅಮಾನತುಗೊಳಿಸಿದ್ದೇ ಕಾರಣ’’ ಎಂದು ಬಾಂಗ್ಲಾದೇಶದ ನಾಯಕ ಮಶ್ರಾಫೆ ಮುರ್ತಝ ಆರೋಪಿಸಿದ್ದಾರೆ.
ಬಾಂಗ್ಲಾದೇಶ ಸೂಪರ್-10 ಸುತ್ತಿನಲ್ಲಿ ನಾಲ್ಕೂ ಪಂದ್ಯಗಳನ್ನು ಸೋಲುವ ಮೂಲಕ ಟೂರ್ನಿಯಿಂದ ಹೊರ ನಡೆದಿತ್ತು. ಶನಿವಾರ ನ್ಯೂಝಿಲೆಂಡ್ ವಿರುದ್ಧ 75 ರನ್‌ಗಳಿಂದ ಸೋಲುವ ಮೂಲಕ ಟೂರ್ನಿಯಲ್ಲಿ ಶೂನ್ಯಸಂಪಾದನೆ ಮಾಡಿತ್ತು.
‘‘ವೇಗದ ಬೌಲರ್ ತಸ್ಕಿನ್ ಅಹ್ಮದ್ ಹಾಗೂ ಎಡಗೈ ಸ್ಪಿನ್ನರ್ ಅರಾಫತ್ ಸನ್ನಿ ಅವರನ್ನು ಟೂರ್ನಿ ನಡೆಯುತ್ತಿದ್ದಾಗಲೇ ಶಂಕಾಸ್ಪದ ಬೌಲಿಂಗ್ ಆರೋಪದ ಮೇಲೆ ಅಮಾನತು ಗೊಳಿಸಿದ ನಿರ್ಧಾರದಿಂದ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿತು. ಕಳೆದ 8 ಪಂದ್ಯಗಳಲ್ಲಿ ತಸ್ಕಿನ್ ಉತ್ತಮ ಪ್ರದರ್ಶನ ನೀಡಿದ್ದರು. ಅವರ ಇಕಾನಮಿ ರೇಟ್ ವಿಶ್ವಶ್ರೇಷ್ಠ ಮಟ್ಟದಲ್ಲಿತ್ತು. ಅವರ ಅನುಪಸ್ಥಿತಿ ನಮಗೆ ತುಂಬಾ ನಷ್ಟವುಂಟು ಮಾಡಿತ್ತು’’ ಎಂದು ಸ್ವದೇಶಕ್ಕೆ ಮರಳಿದ ನಂತರ ಸುದ್ದಿಗಾರರಿಗೆ ಮುರ್ತಝ ತಿಳಿಸಿದರು.





