ಉಪ್ಪಿನಂಗಡಿ: ಅಪರಿಚಿತ ಶವ ಪತ್ತೆ ಕೊಲೆ ಶಂಕೆ

ಉಪ್ಪಿನಂಗಡಿ: ಅಪರಿಚಿತ ವ್ಯಕ್ತಿಯೋರ್ವನ ಮೃತದೇಹ ಭಾನುವಾರ ಉಪ್ಪಿನಂಗಡಿಯ ಹಳೆಗೇಟು ಎಂಬಲ್ಲಿ ನೇತ್ರಾವತಿ ನದಿ ಕಿನಾರೆಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಉಪ್ಪಿನಂಗಡಿ ಸಮೀಪದ ಹಳೆಗೇಟು ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಕೆಳಗಡೆಯಿರುವ ನೇತ್ರಾವತಿ ನದಿ ಕಿನಾರೆಯಲ್ಲಿ ಕವುಚಿ ಬಿದ್ದ ಸ್ಥಿತಿಯಲ್ಲಿ ಮೃತದೇಹವೊಂದನ್ನು ಸ್ಥಳೀಯರು ಕಂಡಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಮೃತಪಟ್ಟ ವ್ಯಕ್ತಿಯ ಮುಖದ ಮೇಲೆ ಗಾಯದ ಕಲೆಗಳಿದ್ದು, ಮುಖ ಹಾಗೂ ಕೈಯಲ್ಲಿ ರಕ್ತ ಕಲೆಗಳು ಕಂಡು ಬಂದಿವೆ. ಅಲ್ಲದೇ, ಪ್ಯಾಂಟ್ ಅರ್ಧ ಜಾರಿದ ಸ್ಥಿತಿಯಲ್ಲಿತ್ತು. ಸುದ್ದಿ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಡಾ. ಕೆಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯ ಡಾ. ಮಹಾಬಲ ಮಾರ್ಲ ನೇತೃತ್ವದ ತಂಡ ಕೂಡಾ ಆಗಮಿಸಿ ಮೃತದೇಹವನ್ನು ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆಎಸ್ ಹೆಗ್ಡೆ ಆಸ್ಪತ್ರೆಗೆ ಸಾಗಿಸಲಾಗಿದೆ.
ಮೃತಪಟ್ಟ ಈ ವ್ಯಕ್ತಿ ಸುಮಾರು 45 ರಿಂದ 52 ವರ್ಷ ಪ್ರಾಯದವಾಗಿದ್ದು, ದಷ್ಟಪುಷ್ಟವಾಗಿದ್ದಾನೆ. ಕಂದು ಬಣ್ಣದ ಪ್ಯಾಂಟ್ ಹಾಗೂ ಲೈಟ್ ಬಿಳಿಯಲ್ಲಿ ಕಪ್ಪು ಗೆರೆ ಬಂದಿರುವ ಅಂಗಿ ಧರಿಸಿದ್ದಾನೆ. ಈತ ಮೃತಪಟ್ಟಿರುವ ಸ್ವಲ್ಪ ದೂರದಲ್ಲಿ ಪಾರಗಾನ್ ಕಂಪೆನಿಯ ಒಂದು ಜೊತೆ ಹವಾಯಿ ಚಪ್ಪಲಿ ಜೋಡಿಸಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನೊಂದು ಕಡೆ ಮದ್ಯದ 180 ಎಂಎಲ್‌ನ ಬಾಟಲಿಯೊಂದು ಪತ್ತೆಯಾಗಿದೆ. ಮೃತದೇಹದ ಜೇಬಿನಲ್ಲಿ 200 ರೂಪಾಯಿ ಬಿಟ್ಟರೆ ಬೇರ್ಯಾವುದೇ ದಾಖಲೆಗಳು ಸಿಕ್ಕಿಲ್ಲ.
ಇದು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಾದರೂ, ಇಲ್ಲಿ ಮಧ್ಯರಾತ್ರಿಯ ಬಳಿಕ ವಾಹನ ಸಂಚಾರ ಕಡಿಮೆ ಇರುತ್ತದೆ. ಅಲ್ಲದೇ, ಹೆದ್ದಾರಿಯ ಕೆಳಗಿರುವ ನದಿ ಕಿನಾರೆಯನ್ನು ರಾತ್ರಿಯ ಹೊತ್ತಿನಲ್ಲಿ ಯಾರೂ ಗಮನಿಸುವುದಿಲ್ಲ. ಈತ ಶನಿವಾರ ರಾತ್ರಿ ಅಥವಾ ಭಾನುವಾರ ಬೆಳಗಿನ ಜಾವ ಮೃತಪಟ್ಟಿರುವ ಸಾಧ್ಯತೆ ಕಂಡು ಬರುತ್ತಿದೆ. ಈತನನ್ನು ಬೇರೆ ಕಡೆ ಕೊಲೆಗೈದು ಇಲ್ಲಿ ತಂದು ಎಸೆದಿರುವ ಸಾಧ್ಯತೆ ಹೆಚ್ಚಿದೆ. ಸಂಶಯ ಬರದಿರಲು ಈತನ ಮೃತದೇಹದ ಬಳಿ ಚಪ್ಪಲಿಯನ್ನು ಜೋಡಿಸಿಟ್ಟಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಇನ್ನೊಂದೆಡೆ ಅಪಘಾತವೆಸಗಿ ಮೃತದೇಹವನ್ನು ಇಲ್ಲಿ ತಂದು ಎಸೆದಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ ಸ್ಥಳಕ್ಕೆ ಪುತ್ತೂರು ಎಎಸ್ಪಿ ಹೃಷ್ಯಂತ್ ಕುಮಾರ್, ಪ್ರೊಬೆಷನರಿ ಎಎಸ್ಪಿ ಲಕ್ಷಣ್ ಲಿಂಬರ್ಗಿ, ಜಿಲ್ಲಾ ಹೆಚ್ಚುವರಿ ಎಸ್ಪಿ ವಿನ್ಸೆಂಟ್ ಶಾಂತಕುಮಾರ್, ಉಪ್ಪಿನಂಗಡಿ ಠಾಣಾಧಿಕಾರಿ ತಿಮ್ಮಪ್ಪ ನಾಯ್ಕ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.






