ಆನೆಕಾಲು ರೋಗ ಜಾಗೃತಿ ಕಾರ್ಯಕ್ರಮ

ಶಿಕಾರಿಪುರ, ಮಾ.27: ಸೊಳ್ಳೆಗಳಿಂದ ತೀವ್ರಗತಿಯಲ್ಲಿ ಹರಡಲಿರುವ ಆನೆಕಾಲು ರೋಗದ ನಿಯಂತ್ರಣಕ್ಕೆ ಚರಂಡಿಯಲ್ಲಿ ನೀರು ನಿಲ್ಲದಂತೆ, ಕೊಳಚೆ ಪ್ರದೇಶ ನಿರ್ಮಾಣವಾಗದಂತೆ ಎಚ್ಚರವಹಿಸುವಂತೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕುಮಾರಸ್ವಾಮಿ ಕರೆ ನೀಡಿದರು.
ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಆನೆಕಾಲು ರೋಗ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉಚ್ಚಲೇರಿಯ ಕ್ಯೂಲೆಕ್ಸ್ ಎಂಬ ಸೊಳ್ಳೆಯು ವ್ಯಕ್ತಿಗೆ ಕಚ್ಚುವುದರಿಂದ ಆನೆಕಾಲು ರೋಗ ಹರಡಲಿದ್ದು. ಸೊಳ್ಳೆಗಳ ನಿರ್ಮೂಲನೆ ರೋಗದ ನಿಯಂತ್ರಣಕ್ಕೆ ಅತ್ಯವಶ್ಯಕವಾಗಿದೆ ಎಂದರು.
ಸಾಮಾನ್ಯವಾಗಿ ಸೊಳ್ಳೆಗಳು ಹೆಚ್ಚಾಗಿ ಮನುಷ್ಯನಿಗೆ ಸಂಜೆ ವೇಳೆಯಲ್ಲಿ ಕಚ್ಚಲಿದ್ದು, ಈ ಅವಧಿಯಲ್ಲಿಯೇ ಆರೋಗ್ಯ ಇಲಾಖೆಯ ಸಿಬ್ಬಂದಿ ತಂಡ ರಾತ್ರಿ 8ರಿಂದ 11ರವರೆಗೆ ಮನೆ ಮನೆ ಸಮೀಕ್ಷೆಗೆ ತಾಲೂಕಿನ ಕೆಲ ಆಯ್ದ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ ಎಂದ ಅವರು, ಇದೇ 28 ಹಾಗೂ 29ರಂದು ಚಿಕ್ಕಜೋಗಿಹಳ್ಳಿ ಹಾಗೂ ಗಾಮ ಗ್ರಾಮದಲ್ಲಿ ನಡೆಯಲಿರುವ ರಕ್ತ ಲೇಪನ ಸಂಗ್ರಹ ಸಮೀಕ್ಷಾ ಕಾರ್ಯಕ್ಕೆ ಗ್ರಾಮಸ್ಥರು ಸಂಪೂರ್ಣ ಸಹಕಾರವನ್ನು ಸಿಬ್ಬಂದಿಗೆ ನೀಡುವಂತೆ ಮನವಿ ಮಾಡಿದರು.
ಚರಂಡಿ ಹಾಗೂ ಕೊಳಚೆ ಪ್ರದೇಶ ಸೊಳ್ಳೆಗಳ ಉತ್ಪತ್ತಿಯ ಬಹು ಮುಖ್ಯ ತಾಣವಾಗಿದ್ದು,ಮನೆ ಸುತ್ತಮುತ್ತ ನೀರು ನಿಲ್ಲದಂತೆ ಸರಾಗವಾಗಿ ಹರಿಯಲು ವ್ಯವಸ್ಥೆ ಕಲ್ಪಿಸಿ ಪರಿಸರ ಸ್ವಚ್ಛತೆಯಿಂದ ಹಲವು ರೋಗಗಳನ್ನು ತಡೆಗಟ್ಟಬಹುದಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ಜಗದೀಶ ಮಾತನಾಡಿ, ಶಿಕಾರಿಪುರ ಹಾಗೂ ಚುರ್ಚುಗುಂಡಿ ಗ್ರಾಮದಲ್ಲಿ ದಪ್ಪಗಾತ್ರದ ಆನೆಕಾಲು ರೋಗದ ಶಂಕಿತ ವ್ಯಕ್ತಿಗಳಿದ್ದು, ರಕ್ತ ಲೇಪನ ಸಂಗ್ರಹ ಸಮೀಕ್ಷಾ ಕಾರ್ಯ ಕೇವಲ ಎರಡು ಗ್ರಾಮಗಳಿಗೆ ಮಾತ್ರ ಸೀಮಿತವಾಗಿಸದೆ ತಾಲೂಕಿನಾದ್ಯಂತ ಇಲಾಖೆ ಹಮ್ಮಿಕೊಂಡು ಉಚಿತ ಚಿಕಿತ್ಸೆ ಮೂಲಕ ರೋಗ ಪೂರ್ಣ ತಡೆಗಟ್ಟಲು ಕ್ರಮಕ್ಕೆ ಆಗ್ರಹಿಸಿ ಆರೋಗ್ಯ ಇಲಾಖೆಗೆ ಸ್ಥಳೀಯ ಸಂಘ ಸಂಸ್ಥೆಗಳು ಪೂರಕವಾಗಿ ಸಹಕರಿಸಲಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ ನಾಗಲೀಕರ್ ಮಾತನಾಡಿ, ಆನೆಕಾಲು ರೋಗದ ನಿಯಂತ್ರಣಕ್ಕೆ ಡಿಇಸಿ ಮಾತ್ರೆಗಳು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನು ಹೆಚ್ಚಿದ್ದು , ವಯೋಮಾನಕ್ಕನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುವುದು ಎಂದ ಅವರು, ಗರ್ಭಿಣಿಯರು, ವಯೋವೃದ್ಧರು,ದೀರ್ಘ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವವರು ಡಿಇಸಿ ಮಾತ್ರೆ ಸೇವಿಸದಂತೆ ತಿಳಿಸಿದರು.
ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎ ಅತ್ತಾರ್ ಸೊಳ್ಳೆಗಳ ನಿಯಂತ್ರಣ, ಸುರಕ್ಷತಾ ಕ್ರಮದ ಬಗ್ಗೆ ವಿವರವಾಗಿ ತಿಳಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಂ.ವೈ ಪೂಜಾರ್ ಮಾತನಾಡಿ, ಕಾಯಿಲೆಯ ಲಕ್ಷಣ, ಕೈಕಾಲು ಊತ, ಸ್ತನ, ವೃಷಣದ ಗಾತ್ರ ಹೆಚ್ಚಾಗುವುದು, ತೀವ್ರ ಜ್ವರ, ನೋವು ಹಾಗೂ ಚಿಕಿತ್ಸೆಯ ಬಗ್ಗೆ ತಿಳಿಸಿದರು.
ಪ್ರಾ.ಆ.ಕೇ ವೈದ್ಯಾಧಿಕಾರಿ ಡಾ.ರಾಜಪ್ಪ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಜಯಪ್ಪ,ಗ್ರಾಪಂ ಮಾಜಿ ಸದಸ್ಯ ಲೋಕೇಶಪ್ಪ, ಪಾಲಾಕ್ಷಮ್ಮ, ಶಾಂತಣ್ಣ, ಕಲವೀರಪ್ಪ, ಪ್ರಕಾಶ್, ರಾಜು ಅಂಗಡಿ ಆರೋಗ್ಯ ಇಲಾಖೆಯ ಪಾಂಡು, ರಾಜುಗೌಡ, ಗೌರಮ್ಮ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಗಾಯತ್ರಿ, ಸುಮಾ ಪ್ರಾರ್ಥಿಸಿ, ಚಂದ್ರಾ ನಾಯ್ಕ ಸ್ವಾಗತಿಸಿ, ಗೀತಾ ನಿರೂಪಿಸಿ, ಕವಿತಾ ವಂದಿಸಿದರು.







