ಸಮಾನತೆಯ ಸಮಾಜವೇ ಅಂಬೇಡ್ಕರ್ ಕನಸು: ಸಿಎಂ ಸಿದ್ದರಾಮಯ್ಯ

ದಾವಣಗೆರೆ,ಮಾ.27:ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶ ನೀಡುವ ಮೂಲಕ ಸಮಾನತೆಯ ತಳಹದಿಯ ಮೇಲೆ ಸಮಾಜ ನಿರ್ಮಾಣವಾಗಬೇಕು. ಆಗ ಮಾತ್ರ ಬುದ್ಧ, ಬಸವ, ಕನಕ, ಅಂಬೇಡ್ಕರ್‌ರಂತ ಮಹನೀಯರು ಕಂಡ ಕನಸು ನನಸಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಕನಕ ಶಾಖಾ ಮಠದಲ್ಲಿ ರವಿವಾರ ಭಕ್ತರ ಭಕ್ತಿಯ ಕುಟೀರ ಉದ್ಘಾಟನೆ ಹಾಗೂ ಐಎಎಸ್, ಕೆಎಎಸ್ ತರಬೇತಿ ಕೇಂದ್ರದ ಶಂಕುಸ್ಥಾಪನೆಯನ್ನು ನೆರವೇರಿಸಿ ಅವರ ಮಾತನಾಡಿದರು. ಕೇವಲ 210 ದಿನಗಳ ದಾಖಲೆ ಅವಧಿಯಲ್ಲಿ ಮಠ ಸ್ಥಾಪಿಸುವ ಮೂಲಕ ಮನಸ್ಸಿದ್ದಲ್ಲಿ ಮಾರ್ಗವಿದೆ, ಗುರಿ ಇದ್ದಲ್ಲಿ ಗೆಲುವಿದೆ ಎಂದು ಕಾಗಿನೆಲೆ ಮಹಾಸಂಸ್ಥಾನ ಪೀಠ ಕನಕ ಶಾಖಾ ಮಠವನ್ನು ಸ್ಥಾಪಿಸುವ ಮೂಲಕ ಸಾಧಿಸಿ ತೋರಿಸಿದ್ದು, ವ್ಯಂಗ್ಯವಾಡಿದವರಿಗೆ, ಕಾಲೆಳೆದವರಿಗೆ ತಕ್ಕ ಉತ್ತರ ನೀಡಿದೆ ಎಂದರು.
ಕೌಶಲ್ಯ ಅಭಿವೃದ್ಧಿಗೆ 500 ಕೋಟಿ ರೂ.:
ರಾಜ್ಯದಲ್ಲಿ ಕೆಳವರ್ಗದವರಿಗೆ ಉದ್ಯೋಗ ತರಬೇತಿಗಳನ್ನು ನೀಡಿ ಅವರನ್ನು ಸಹ ಎಲ್ಲರಂತೆ ಉದ್ಯೋಗಸ್ಥರನ್ನಾಗಿಸುವ ಉದ್ದೇಶದಿಂದ ಈಗಾಗಲೇ ಬಜೆಟ್‌ನಲ್ಲಿ ಕೌಶಲ್ಯ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ನಿಗದಿ ಪಡಿಸಿದ್ದು, ಈ ಮೂಲಕ ಕೆಳವರ್ಗದವರ ಏಳ್ಗೆಗೆ ಸರಕಾರ ಬದ್ಧವಾಗಿದೆ ಎಂದ ಅವರು, ಕಾಂಗ್ರೆಸ್ ಸರಕಾರ ಎಂದಿಗೂ ಸಾಮಾಜಿಕ ನ್ಯಾಯಕ್ಕೆ ಬದ್ಧ್ದವಾಗಿದ್ದು, ಸರ್ವರಿಗೂ ಸಮಪಾಲು, ಸಮಬಾಳು ನೀಡುವ ನಿಟ್ಟಿನಲ್ಲಿ ಸಾಗುತ್ತಿದೆ ಎಂದರು. ಇವರೆಗೆ ಯಾವ ಸರಕಾರವೂ ಮಾಡದ ಕಾರ್ಯವನ್ನು ಕಾಂಗ್ರೆಸ್ ಸರಕಾರ ಮಾಡಿದ್ದು, ಐಎಎಸ್, ಕೆಎಎಸ್ ತರಬೇತಿ ಪಡೆಯುವ ಯಾವುದೇ ವರ್ಗದ ವಿದ್ಯಾರ್ಥಿಗಳಿಗೆ 89 ಸಾವಿರ ರೂ. ಸಹಾಯಧನ ಹಾಗೂ ತಿಂಗಳಿಗೆ 8 ಸಾವಿರ ಊಟದ ವೆಚ್ಚ ನೀಡಿದ ಸರಕಾರ ನಮ್ಮದು ಎಂದ ಅವರು, ಕನಕ ಶಾಖಾ ಮಠ ಐಎಎಸ್, ಕೆಎಎಸ್ ತರಬೇತಿ ಆರಂಭಿಸಿದ್ದು, ಇದಕ್ಕೆ ಸರಕಾರದಿಂದ ಎಲ್ಲ ರೀತಿಯ ನೆರವು ನೀಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಹೀಯಾಳಿಕೆ ಸಮಾಜದ ರೋಗ:
ಯಾವಾಗಲೂ ಮತ್ತೊಬ್ಬರನ್ನು ಹಂಗಿಸುವ, ಹೀಯಾಳಿಸುವಂತದ್ದು ಸಮಾಜದ ಒಂದು ರೋಗ. ಇದರ ನಡುವೆಯೇ ಶೋಷಿತ ವರ್ಗ ಮೇಲೆ ಬರುವ ಯತ್ನ ಮಾಡಬೇಕು. ಸಮಾಜದಲ್ಲಿ ಕೆಲ ಪಟ್ಟಭದ್ರರು ಸಮಾನತೆ ಬೇಡ ಎಂದು ಹುನ್ನಾರ ನಡೆಸುತ್ತಾ ವ್ಯವಸ್ಥಿತವಾಗಿ ಕೆಳವರ್ಗದವರನ್ನು ಶೋಷಣೆ ಮಾಡುತ್ತಲೇ ಬಂದಿದ್ದಾರೆ. ಹಾಗಾಗಿ, ನಾವು ಇಂಥವರಿಗೆ ಹೆದರುತ್ತಾ ಕೂರುವ ಬದಲು ಮೇಲೆಳುವ ಪ್ರಯತ್ನ ಮಾಡಬೇಕಿದೆ ಎಂದ ಅವರು, ಇದಕ್ಕಿರುವ ಪರಿಹಾರವೆಂದರೆ ಸರ್ವರೂ ಶಿಕ್ಷಣವಂತರಾಗುವುದು ಎಂದರು. ಯಾವ ದಿನ ಸಂಪತ್ತು ಮತ್ತು ಅಧಿಕಾರದಲ್ಲಿ ಪ್ರತಿಯೊಬ್ಬರಿಗೂ ಸಮಪಾಲು ಸಿಗುತ್ತದೋ ಅಂದು ಮಾತ್ರ ಸಮಾನತೆ, ಬದಲಾವಣೆ ಹಾಗೂ ಅಭಿವೃದ್ಧಿ ಸಾಧ್ಯ. ಶೋಷಿತರನ್ನು ಅಕ್ಷರ ಸಂಸ್ಕೃತಿಯಿಂದ ದೂರವಿಟ್ಟು ಸಮಾಜವನ್ನು ಚಲನರಹಿತವಾಗಿ ಮಾಡುತ್ತಿರುವವರ ಬಗ್ಗೆ ಶೋಷಿತರ ಎಚ್ಚರವಹಿಸಬೇಕು ಎಂದರು.
ಸಹಪಂಕ್ತಿ ಭೋಜನವಿಲ್ಲ:
ನಮ್ಮ ರಾಜ್ಯದ ಅನೇಕ ಕಡೆಗಳಲ್ಲಿ ಇಂದಿಗೂ ಸಹಪಂಕ್ತಿ ಭೋಜನ ಇಲ್ಲ. ಮೊದಲಿಗೆ, ಇಂತಹ ಆಚರಣೆಗಳು ಬದಲಾಗಬೇಕು. ಇದಕ್ಕೆ ಸಾಮಾಜಿಕ, ಧಾರ್ಮಿಕ ಜಾಗೃತಿ ಅಗತ್ಯವಾಗಿದ್ದು, ಇಂತಹ ಕಾರ್ಯಗಳನ್ನು ಮಠ ಮಾನ್ಯಗಳು ಹೆಚ್ಚಿ ನ ಮುತುವರ್ಜಿ ವಹಿಸಿ ಮಾಡುತ್ತಾ ಸಾಮಾಜಿಕ ಮತ್ತು ಧಾರ್ಮಿಕ ಜಾಗೃತಿ ಮೂಡಿಸಬೇಕು. ಅಂದಾಗ ಮಾತ್ರ ಸಹಪಂಕ್ತಿ ಭೋಜನ ಎಲ್ಲೆಡೆ ಕಾಣಲು ಸಾಧ್ಯವಾಗುತ್ತದೆ ಎಂದರು.
ದಾಖಲೆಯ ಮಠ:
ಕಾಗಿನೆಲೆ ಗುರುಪೀಠದ ಶ್ರೀನಿರಂಜನಾ ನಂದಪುರಿ ಶ್ರೀ ಪ್ರಾಸ್ತಾವಿಕ ಮಾತನಾಡಿ, ಐದಾರು ತಿಂಗಳಲ್ಲಿ ಮಠ ಕಟ್ಟಲು ಹೊರಟ ನಮ್ಮನ್ನು ಅನೇಕರು ಗೇಲಿ ಮಾಡಿದ್ದರು. ಆದರೆ, ಕೇವಲ 210 ದಿನಗಳಲ್ಲಿ ಭಕ್ತರ ಭಕ್ತಿಯ ಕುಟೀರವನ್ನು ನಿರ್ಮಾಣ ಮಾಡುವ ಮೂಲಕ ಎಲ್ಲ್ಲ ಟೀಕೆಗಳಿಗೆ ಉತ್ತರ ನೀಡಿದ್ದೇವೆ ಎಂದ ಅವರು, ಹಾಲು ಕೆಡುತ್ತದೆ. ಆದರೆ, ಹಾಲುಮತ ಸಮುದಾಯ ಎಂದಿಗ್ರೂ ಕೆಡುವುದಿಲ್ಲ. ಸಮಾಜಕ್ಕೆ ಹಾಲುಮತ ಸಮುದಾಯ ಮಾದರಿಯಾಗುವಂತಹ ಕೆಲಸ ಮಾಡುತ್ತದೆ ಎಂದು ಹೇಳಿದರು.
ಮಠದ ಅಭಿವೃದ್ಧಿಗೆ ಎಲ್ಲ ಧರ್ಮದವರು ಸಹಾಯ ಮಾಡಿದ್ದು, ಕನಕ ಶಾಖಾ ಮಠವನ್ನು ಭಕ್ತರ ಅಪೇಕ್ಷೆಯಂತೆ ನಿರ್ಮಿಸಿದ್ದೇವೆ. ಮುಂದಿನ ದಿನಗಳಲ್ಲಿ ಇತರೆ ಜಿಲ್ಲೆಗಳಲ್ಲಿ ಭಕ್ತರು ಅಪೇಕ್ಷೆಪಟ್ಟಲ್ಲಿ ಅಲ್ಲಿಯೂ ಶಾಖಾ ಮಠ ನಿರ್ಮಾಣ ಮಾಡಲು ಮುಂದಾಗುತ್ತೇವೆ ಎಂದ ಅವರು, ಐಎಎಸ್, ಕೆಎಎಸ್ ತರಬೇತಿ ಕೇಂದ್ರ ಪ್ರಾರಂಭಿಸಲು ಮುಖ್ಯಮಂತ್ರಿ ಕೂಡಲೇ ಅನುದಾನ ಬಿಡುಗಡೆ ಮಾಡಬೇಕೆಂದು ಇದೇ ವೇಳೆ ಅವರು ಮನವಿ ಮಾಡಿದರು.
ಈ ವೇಳೆ ಮಠಕ್ಕೆ ಭೂದಾನ, ಧನಸಹಾಯ ಮಾಡಿದ ಎಲ್ಲ್ಲ ಸಮುದಾಯದವರನ್ನು ಸನ್ಮಾನಿಸಲಾಯಿತು ಹಾಗೂ ಹಾಲುಮತ ಶೈವಪಥ ದಶಮಾನೋತ್ಸವ ಸ್ಮರಣ ಸಂಚಿಕೆಯನ್ನು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮತ್ತಿತರ ಗಣ್ಯರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಹೊಸದುರ್ಗ ಈಶ್ವರಾನಂದಪುರಿ ಶ್ರೀ, ಕೈಲಾಸ ಆಶ್ರಮದ ಜಯಂದ್ರಪುರಿ ಶ್ರೀ, ತಿಂಥಣಿಯ ಸಿದ್ದರಾಮನಂದಪುರಿ ಶ್ರೀ ವಹಿಸಿದ್ದರು.
ಮಾಜಿ ಸಂಸದ ಎಚ್. ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ, ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಅಬಕಾರಿ ಸಚಿವ ಮನೋಹರ ತಹಶೀಲ್ದಾರ್, ಶಾಸಕರಾದ ಎಚ್.ಪಿ. ರಾಜೇಶ್, ಡಿ.ಜಿ. ಶಾಂತನಗೌಡ, ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ಎಚ್.ಎಂ. ರೇವಣ್ಣ, ಪ್ರಸನ್ನಕುಮಾರ, ಕೆಎಸ್‌ಐಸಿ ಅಧ್ಯಕ್ಷ ಡಿ. ಬಸವರಾಜ್, ಬಯಲುಸೀಮೆ ಪ್ರಾಧಿಕಾರದ ಅಧ್ಯಕ್ಷ ಕೆಂಗೋ ಹನುಮಂತಪ್ಪ, ಕಾಂಗ್ರೆಸ್ ಮುಖಂಡ ಎಸ್. ರಾಮಪ್ಪ, ಮಾಜಿ ಶಾಸಕ ಕೆ. ಮಲ್ಲಪ್ಪ, ಮತ್ತಿತರರು ಉಪಸ್ಥಿತರಿದ್ದರು. ರಾಜ್ಯದಲ್ಲಿ ಎಸಿಬಿ, ಲೋಕಾಯುಕ್ತ ಎರಡೂ ಸಂಸ್ಥೆಗಳು ಕಾರ್ಯನಿರ್ವಹಿಸಲಿವೆ







