ಸರಕಾರದ 2 ಕೋಟಿ ರೂ.ಅನುದಾನ ಪರಿಣಾಮಕಾರಿ ಬಳಕೆಗೆ ಕ್ರಮ: ಎಲ್.ಬಿ.ಶೇಖ
ಬೆಂಗಳೂರು, ಮಾ.27: ಹವ್ಯಾಸ ರಂಗಭೂಮಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಸಕ್ತದ ಆಯವ್ಯಯದಲ್ಲಿ 2ಕೋಟಿ ರೂ. ಅನುದಾನ ಸಿಕ್ಕಿದ್ದು, ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು ಎಂದು ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷ ಎಲ್.ಬಿ.ಶೇಖ(ಮಾಸ್ತರ್) ತಿಳಿಸಿದ್ದಾರೆ.
ರವಿವಾರ ಕರ್ನಾಟಕ ನಾಟಕ ಅಕಾಡೆಮಿ ನಗರದ ಸಂಸ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ‘ವಿಶ್ವ ರಂಗಭೂಮಿ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಂಗಭೂಮಿ ಕ್ಷೇತ್ರದಲ್ಲಿ ಹವ್ಯಾಸಿ ರಂಗ ಭೂಮಿಗೆ ವಿಶಿಷ್ಟವಾದ ಸ್ಥಾನಮಾನವಿದೆ. ಸಮಾಜದ ಸಮಸ್ಯೆಗಳ ವಿರುದ್ಧ ಜನಜಾಗೃತಿ ಮೂಡಿಸುವುದೆ ಹವ್ಯಾಸ ರಂಗಭೂಮಿಯ ಮುಖ್ಯ ಧ್ಯೇಯವಾಗಿದೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿ ನಲ್ಲಿ ಸರಕಾರ ನಿಡಿರುವ ಅನುದಾವನ್ನು ಯಶಸ್ವಿ ಯಾಗಿ ಬಳಸಿಕೊಳ್ಳಲಾಗುವುದು ಎಂದು ಎಲ್. ಬಿ.ಶೇಖ್ ತಿಳಿಸಿದರು.
ಪ್ರಸಕ್ತ ರಂಗಭೂಮಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸ್ವ ವಿಮರ್ಶಿಸಿ, ಸೂಕ್ತ ಪರಿಹಾರ ಹುಡುಕುವುದು ರಂಗಭೂಮಿ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರಂಗಭೂಮಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ನಟ ದತ್ತಣ್ಣ ಮಾತನಾಡಿ, ಪ್ರಸಕ್ತ ದಿನಗಳು ಆತಂಕದ ದಿನಗಳಾಗುತ್ತಿವೆ. ಎಲ್ಲೆಲ್ಲೂ ಆಶಾಂತಿಯೆ ತುಂಬಿದೆ. ಇಂತಹ ಸಂದಿಗ್ಧ ಸ್ಥಿತಿಯನ್ನು ರಂಗಭೂಮಿಯ ಮೂಲಕ ಹೇಗೆ ತಿಳಿ ಮಾಡುವುದು ಎಂಬುದನ್ನು ಚಿಂತಿಸಬೇಕಾಗಿದೆ. ಇದಕ್ಕೆ ವಿಶ್ವರಂಗಭೂಮಿ ದಿನಾಚರಣೆ ಪ್ರೇರಣೆಯಾಗಲಿ ಎಂದು ತಿಳಿಸಿದರು.
ಬೀದಿ ನಾಟಕಗಳು ರಂಗಭೂಮಿಯ ವಿಶಿಷ್ಟ ಕೊಡುಗೆ. ಯಾವುದೇ ಖರ್ಚಿಲ್ಲದೆ ಜನರ ಹತ್ತಿರವೇ ಹೋಗಿ ಕಲಾ ಪ್ರದರ್ಶನ ಮಾಡುವ ಅವಕಾಶ ಇರುವುದು ಬೀದಿ ನಾಟಕಗಳಿಗೆ ಮಾತ್ರ. ಆದರೆ, ಇಂದಿನ ಆಧುನಿಕ, ನಗರಿಕರಣಗೊಳ್ಳುತ್ತಿರುವ ದಿನಗಳಲ್ಲಿ ಬೀದಿ ನಾಟಕಗಳು ಮರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ, ಹಿರಿಯ ರಂಗ ಕಲಾವಿದೆ ಭಾರ್ಗವಿ ನಾರಾಯಣ್ ಮತ್ತಿತರರಿದ್ದರು.







