2018ರ ಅ.2ಕ್ಕೆ ಗ್ರಾಮೀಣ ಕರ್ನಾಟಕ ಬಯಲು ಬಹಿರ್ದೆಸೆ ಮುಕ್ತ: ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು, ಮಾ. 27: ರಾಜ್ಯದ ಗ್ರಾಮೀಣ ಕರ್ನಾಟಕವನ್ನು 2018ರ ಅಕ್ಟೋಬರ್ 2ರೊಳಗಾಗಿ ಬಯಲು ಬಹಿರ್ದೆಸೆ ಮುಕ್ತ ಕರ್ನಾಟಕವನ್ನಾಗಿ ಮಾಡಲು ದಿಟ್ಟ ಹೆಜ್ಜೆಯನ್ನಿಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಶನಿವಾರ ಬೆಳಗಾವಿಯಲ್ಲಿ ಏರ್ಪಡಿಸಿದ್ದ ಏಳು ತಿಂಗಳಲ್ಲಿ ಜಿಲ್ಲೆಯಲ್ಲಿ ಒಂದು ಲಕ್ಷ ಶೌಚಾಲಯ ನಿರ್ಮಿಸಲು ಮುತುವರ್ಜಿ ವಹಿಸಿದ ಬೆಳಗಾವಿ ಜಿ.ಪಂ. ಅಧ್ಯಕ್ಷರು ಹಾಗೂ ಪಿಡಿಒಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಆಡಳಿತಕ್ಕೆ ಬಂದ ಬಳಿಕ 50 ಲಕ್ಷ ಶೌಚಾಲಯ ನಿರ್ಮಾಣದ ಗುರಿ ಹಾಕಿಕೊಂಡಿದ್ದು, ಆ ಪೈಕಿ ಈಗಾಗಲೇ 22 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದರು.
ಮುಂದಿನ ಹಣಕಾಸು ವರ್ಷದಲ್ಲಿ 12 ಲಕ್ಷ ಶೌಚಾಲಯ ನಿರ್ಮಾಣದ ಗುರಿ ಹಾಕಿಕೊಂಡಿದ್ದು, ಅದಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುವುದು ಎಂದ ಅವರು, ಬೆಳಗಾವಿಯಲ್ಲಿ 7ತಿಂಗಳಲ್ಲೆ 1ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 30ಗ್ರಾ.ಪಂ.ಗಳಲ್ಲಿ 103 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿ ಮಾಡಿರುವುದು ನಿಜಕ್ಕೂ ದಾಖಲೆಯೇ ಸರಿ ಎಂದು ಶ್ಲಾಘಿಸಿದರು.
ರಾಜ್ಯದಲ್ಲಿ ಶೌಚಾಲಯ ನಿರ್ಮಿಸುವುದರ ಜೊತೆಗೆ ಬಚ್ಚಲು ಮನೆಗಳನ್ನು ನಿರ್ಮಿಸುವ ‘ಗೌರವ’ ಯೋಜನೆಯೊಂದನ್ನು ಜಾರಿಗೊಳಿಸ ಲಾಗಿದೆ ಎಂದ ಅವರು, ಕರ್ನಾಟಕ ರಾಜ್ಯ ವನ್ನು ‘ಚೆಲುವ ಕರ್ನಾಟಕ’ ವನ್ನಾಗಿ ಮಾಡಲು ರಾಜ್ಯ ಸರಕಾರ ಸಂಕಲ್ಪ ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಸುರೇಶ್ ಅಂಗಡಿ, ಶಾಸಕ ಸಂಜಯ್ ಪಾಟೀಲ್, ಅಪರ ಮುಖ್ಯ ಕಾರ್ಯದರ್ಶಿ ಸುಭಾಶ್ ಚಂದ್ರ, ಶಾಸಕ ಗಣೇಶ್ ಹುಕ್ಕೇರಿ, ಜಿಲ್ಲಾಧಿಕಾರಿ ಜಯರಾಮ್, ಸಿಇಒ ಬಗಾದಿ ಗೌತಮ ಸೇರಿದಂತೆ ಇನ್ನಿತರರು ಹಾಜರಿದ್ದರು.





