ಸರಕಾರದಿಂದ 5 ಲಕ್ಷ ಕೃಷಿ ಹೊಂಡ: ಪ್ರಧಾನಿ

ಹೊಸದಿಲ್ಲಿ, ಮಾ.27: ದೇಶದ ಕೆಲವು ಭಾಗಗಳಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಸರಕಾರವು 5 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಲಿದೆಯೆಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ಇದೇ ವೇಳೆ, ಸಣ್ಣ ಜಲಾಶಯಗಳ ನಿರ್ಮಾಣದಂತಹ ಜಲ ಸಂರಕ್ಷಣೆಯ ಉಪಾಯಗಳನ್ನು ಅನುಸರಿಸುವಂತೆ ಅವರು ಜನರಿಗೆ ಕರೆ ನೀಡಿದ್ದಾರೆ.
ತನ್ನ ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕೀ ಬಾತ್'ನಲ್ಲಿ ಪ್ರಧಾನಿ, ರೈತರು ತಮ್ಮ ಲಾಭಕ್ಕಾಗಿ ಕಡಿಮೆ ರಸಗೊಬ್ಬರಗಳನ್ನು ಉಪಯೋಗಿಸಬೇಕು ಹಾಗೂ 'ಫಾರ್ಮಸ್ ಆ್ಯಪ್' ನಂತಹ ಆಧುನಿಕ ತಂತ್ರಜ್ಞಾನವನ್ನು ಹೆಚ್ಚು ಉಪಯೋಗಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ತನ್ನ 30 ನಿಮಿಷಗಳ ಕಾರ್ಯಕ್ರಮದಲ್ಲಿ, ಎ.14ರಂದು ನಡೆಯಲಿರುವ ದಲಿತನಾಯಕ ಬಿ.ಆರ್.ಅಂಬೇಡ್ಕರರ 125ನೆ ಜಯಂತಿಯ ಸಂದರ್ಭದಲ್ಲಿ ಅವರಿಗೆ ಸಂಬಂಧಿಸಿದ ಎಲ್ಲ 5 ಸ್ಥಳಗಳಲ್ಲಿ ಸರಕಾರವು ಹೇಗೆ ಅಭಿವೃದ್ಧಿಪಡಿಸುತ್ತಿದೆಯೆಂಬುದನ್ನು ಪ್ರಧಾನಿ ವಿವರಿಸಿದ್ದಾರೆ.
ದೇಶಕ್ಕೆ ಈಸ್ಟರ್ ಹಬ್ಬದ ಶುಭಾಶಯ ಕೋರಿದ ಅವರು, ರಜಾ ಕಾಲದಲ್ಲಿ ಕೆಲವು ಕೌಶಲಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ, ದೇಶದಲ್ಲಿ ಡಯಾಬಿಟಿಸನ್ನು ಹಿಮ್ಮೆಟ್ಟಿಸಿ ಕ್ಷಯ ರೋಗವನ್ನು ನಿರ್ಮೂಲಗೊಳಿಸುವಂತೆ ಜನರಿಗೆ ಒತ್ತಾಯ ಸಹಿತ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.





