ಪತ್ರಕರ್ತ ರಾಜ್‌ದೀಪ್-ಅಂಜನಾಗೆ ಸಂಘ ಪರಿವಾರದ ಕಿರುಕುಳ!
ಹೊಸದಿಲ್ಲಿ, ಮಾ.27: ತನಗೆ ವಿಎಚ್‌ಪಿ-ಹಿಂದೂ ಸೇನಾಗಳು ಕಿರುಕುಳ ನೀಡುತ್ತಿವೆಯೆಂದು ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ರವಿವಾರ ದೂರಿದ್ದಾರೆ. 'ಚಂದನ್ ಪ್ರತಿಹಸ್ತ್' ಎಂಬಾತನ ಫೇಸ್‌ಬುಕ್ ಪುಟದಲ್ಲಿ ಸರ್ದೇಸಾಯಿಯವರ ಮೊಬೈಲ್ ನಂಬರ್ ಪೋಸ್ಟ್ ಆಗಿದ್ದು, ಈ ಬಳಿಕ ಅವರಿಗೆ ಅವಾಚ್ಯ ನಿಂದನೆಗಳ ಕರೆಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವರು ಈ ಆರೋಪ ಮಾಡಿದ್ದಾರೆ.
ತನ್ನ ಖಾಸಗಿತನದ ಉಲ್ಲಂಘನೆ ಹಾಗೂ ಕಿರುಕುಳದ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಲು ರಾಜ್‌ದೀಪ್ ಟ್ವಿಟರನ್ನು ಉಪಯೋಗಿಸಿದ್ದಾರೆ.
ಪ್ರತಿಹಸ್ತ್ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ, ''ನಾನು ಇಂಡಿಯಾ ಟುಡೆ ಹಾಗೂ ಆಜ್‌ತಕ್ ಪತ್ರಕರ್ತರಾದ ಸರ್ದೇಸಾಯಿ ಹಾಗೂ ಅಂಜನಾ ಓಂಕಶ್ಯಪರ ದೂರವಾಣಿ ಸಂಖ್ಯೆಗಳನ್ನು ಪೋಸ್ಟ್ ಮಾಡುತ್ತಿದ್ದೇನೆ. ಅವರ ಕಚೇರಿಗಳಿಂದ ಕೆಲವೇ ಕಿ.ಮೀ. ದೂರದಲ್ಲಿದ್ದಾಗಲೂ, ಅವರೇಕೆ ಹತ್ಯೆಯಾಗಿರುವ ದಿಲ್ಲಿಯ ದಂತವೈದ್ಯ ಡಾ. ನಾರಂಗ್‌ರ ಮನೆಗೆ ಹೋಗಲಿಲ್ಲವೆಂದು ದಯವಿಟ್ಟು ಅವರಿಬ್ಬರಲ್ಲೂ ಕೇಳಿ. ಯಾರಲ್ಲಾದರೂ ಎನ್‌ಡಿಟಿವಿ-ಇಂಡಿಯಾದ ರವೀಶ್‌ಕುಮಾರ್‌ರ ದೂರವಾಣಿ ಸಂಖ್ಯೆಯಿದ್ದರೆ ದಯವಿಟ್ಟು ಒದಗಿಸಿ ಅವರನ್ನೂ ತರಾಟೆಗೆ ತೆಗೆದುಕೊಳ್ಳಬೇಕಾಗಿದೆ'' ಎಂದು ಬರೆದಿದ್ದಾರೆ.
''ಫೇಸ್‌ಬುಕ್‌ನಲ್ಲಿ ನನ್ನ ದೂರವಾಣಿ ಸಂಖ್ಯೆ ಹಾಕಿದ ಹಾಗೂ ಬೆಳಗ್ಗಿನಿಂದ ನಿಮಿಷಕ್ಕೊಮ್ಮೆ ತನಗೆ ಕರೆ ಮಾಡುತ್ತಿರುವ ವಿಎಚ್‌ಪಿ-ಹಿಂದೂ ಸೇನಾದ ನನ್ನ ಮಿತ್ರರೇ ಖಾಸಗಿತನದ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು? ನಾವೆಲ್ಲರೂ ಡಾ. ನಾರಂಗ್‌ಗೆ ನ್ಯಾಯವನ್ನು ಬಯಸುತ್ತಿದ್ದೇವೆ. ಆದರೆ, ಕ್ಷಮಿಸಿ. ನೀವು ಕೆಲವರು ಪ್ರಬಲವಾಗಿ ಇಚ್ಛಿಸಿರುವಂತೆ ತಾನು ಅದನ್ನು ಮತೀಯ ಕನ್ನಡಕದ ಮೂಲಕ ನೋಡಲಾರೆ. ಕ್ಷಮೆಯಿರಿಲಿ'' ಎಂದವರು ಟ್ವೀಟಿಸಿದ್ದಾರೆ.
ದೂರವಾಣಿಯಲ್ಲಿ ತನ್ನನ್ನು ಬೈದವರಿಗೆ- ದೂರವಾಣಿಯಲ್ಲಿ ದ್ವೇಷ ಭಾಷಣವು ಯಾವ ಸಂಸ್ಕೃತಿಯನ್ನು ಸಮರ್ಥಿಸುವುದೋ ತನಗೆ ತಿಳಿಯದು. ದಯವಿಟ್ಟು ಹೇಳಿ ಎಂದು ರಾಜ್‌ದೀಪ್ ಹೇಳಿದ್ದಾರೆ.





