ದೇವಳದ ಆವರಣದಲ್ಲೇ ವೃದ್ಧನಿಗೆ ಒದ್ದ ಬಿಜೆಪಿ ಸಂಸದ

ವೀಡಿಯೊ ಬಹಿರಂಗ
ಅಹ್ಮದಾಬಾದ್, ಮಾ.27: ಧಾರ್ಮಿಕ ಕಾರ್ಯ ಕ್ರಮವೊಂದರ ವೇಳೆ ಪೋರಬಂದರ್‌ನ ಬಿಜೆಪಿ ಸಂಸದ ವಿಠ್ಠಲ ರಡಾಡಿಯಾ ವೃದ್ಧ ವ್ಯಕ್ತಿಯೊಬ್ಬರಿಗೆ ಒದೆಯುತ್ತಿರುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುತ್ತು ಹೊಡೆಯುತ್ತಿದೆ.
ಆದರೆ, ವ್ಯಕ್ತಿಗೆ ಒದ್ದ ಆರೋಪವನ್ನು ರಡಾಡಿಯಾ ನಿರಾಕರಿಸಿದ್ದಾರೆ. ನಿನ್ನೆ ರಾತ್ರಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವೀಡಿ ಯೊದಲ್ಲಿ ಕಾಣಿಸಿರುವ ವ್ಯಕ್ತಿ ಧಾರ್ಮಿಕ ಸಮಾರಂಭವೊಂದರಲ್ಲಿ ಮೂಢನಂಬಿಕೆಗಳನ್ನು ಹರಡಲು ಯತ್ನಿಸುತ್ತಿದ್ದನೆಂದು ಆರೋಪಿಸಿದರು.

ಸಮಾರಂಭದಲ್ಲಿ ತಾತ್ಕಾಲಿಕ ಗುಡಾರವೊಂದರಲ್ಲಿ ಕುಳಿತಿದ್ದ ವೃದ್ಧ ವ್ಯಕ್ತಿಯ ಬಳಿಗೆ ಬಿಳಿ ಅಂಗಿ ಹಾಗೂ ಪ್ಯಾಂಟ್ ತೊಟ್ಟಿದ್ದ ರಡಾಡಿಯಾ ಹೋಗು ತ್ತಿರುವುದು, ಬಿಟ್ಟುಬಿಡು ವಂತೆ ಅಂಗಲಾಚುತ್ತಿದ್ದ ವೃದ್ಧನಿಗೆ ಆಕ್ರೋಶಿತ ರಡಾಡಿಯಾ ಒದೆಯುತ್ತಿರುವುದು, ಆತನ ಗಂಟು ಮೂಟೆಗಳನ್ನು ಎತ್ತಿ ಹೊರಗೆ ನಡೆಯುವಂತೆ ಸನ್ನೆ ಮಾಡುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಒಂದು ವಾರದ ಹಿಂದೆ ರಾಜಕೋಟ್‌ನ ಜಮಕಂಡೋರ್ನಾದಲ್ಲಿ ನಡೆದಿದ್ದ ಧಾರ್ಮಿಕ ಸಮಾರಂಭವೊಂದರಲ್ಲಿ ಚಿತ್ರಿಸಿದ ವೀಡಿಯೊ ಅದೆನ್ನಲಾಗಿದೆ. ವೃದ್ಧನಿಗೆ ಒದೆದುದನ್ನು ನಿರಾಕರಿಸಿರುವ ರಡಾಡಿಯಾ, ತಾನು ಆತನಿಗೆ ಕೇವಲ ಸ್ಥಳದಿಂದ ಹೋಗುವಂತೆ ಹೇಳಿದ್ದೆನೆಂದಿದ್ದಾರೆ.
2012ರಲ್ಲಿ ವಡೋದರಾದ ಸಮೀಪದ ಕರ್ಜನ್‌ನ ಟೋಲ್ ಬೂತ್ ಸಿಬ್ಬಂದಿಗೆ ರಡಾಡಿಯಾ ಬಂದೂಕು ಝಳಪಿಸಿದ್ದ ವೀಡಿಯೊ ಪ್ರಸಾರವಾಗಿ ವಿವಾದ ಸೃಷ್ಟಿಸಿತ್ತು. ಆಗ ಕಾಂಗ್ರೆಸ್ ಸಂಸದರಾಗಿದ್ದ ಅವರು ಗುರುತಿನ ಚೀಟಿ ಕೇಳಿದ್ದ ಟೋಲ್ ಬೂತ್ ಸಿಬ್ಬಂದಿಗೆ ರೈಫಲ್‌ನೊಂದಿಗೆ ಕಾರಿಂದಿಳಿದು ಕೊಲೆ ಬೆದರಿಕೆ ಹಾಕಿದ್ದರು.
ಸರಕಾರಿ ಅಧಿಕಾರಿಗಳ ವಿರುದ್ಧ ಮಾಡಿರುವ ಅಪರಾಧಿಗಳಿಗಾಗಿ ರಡಾಡಿಯಾ ವಿರುದ್ಧ ಅನೇಕ ಪೊಲೀಸ್ ಪ್ರಕರಣಗಳಿವೆ.







