ಎಸೆಸೆಲ್ಸಿ ಪರೀಕ್ಷೆ ಸಹಾಯವಾಣಿ ಆರಂಭ

ಬೆಂಗಳೂರು, ಮಾ. 27: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಭಯ ರಹಿತವಾಗಿ ಪರೀಕ್ಷೆ ಬರೆಯಲು ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸಹಾಯವಾಣಿಯನ್ನು ಆರಂಭ ಮಾಡಲಾಗಿದೆ ಎಂದು ಪ್ರೌಢ ಶಿಕ್ಷಣ ಮಂಡಳಿಯ ಪ್ರಕಟನೆ ತಿಳಿಸಿದೆ.
ಎಸೆಸೆಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನದಲ್ಲಿ ನಿರ್ಣಾಯಕ ಹಂತ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತೀಹೆಚ್ಚಿನ ಅಂಕಗಳನ್ನು ಮಕ್ಕಳು ಗಳಿಸಬೇಕೆಂಬುದು ಪೋಷಕರ ಅಭಿಲಾಷೆಯೂ ಆಗಿರುತ್ತದೆ. ಸಾಮರ್ಥ್ಯ, ಆಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳದೇ ಹೆಚ್ಚು ಅಂಕಗಳನ್ನು ಗಳಿಸಿ ಎಂದು ಮಕ್ಕಳ ಮೇಲೆ ಪೋಷಕರ ಒತ್ತಡ ಹಾಕುತ್ತಿರುತ್ತಾರೆ.
ಇದರಿಂದ ವಿದ್ಯಾರ್ಥಿಗಳು ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಯಾಗದೆ ಸಮರ್ಥವಾಗಿ ಪರೀಕ್ಷೆಯನ್ನು ಬರೆಯಲು ಸಾಧ್ಯವಿಲ್ಲ. ಆದುದರಿಂದ ಮಕ್ಕಳ ಮೇಲೆ ಪೋಷಕರು ಒತ್ತಡ ಹೇರುವುದನ್ನು ಬಿಟ್ಟು ಸಮರ್ಥವಾಗಿ ಪರೀಕ್ಷೆ ಬರೆಯಲು ಸ್ಫೂರ್ತಿ ನೀಡಬೇಕಾದ ಆವಶ್ಯಕತೆ ಇದೆ.
ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಪರಿಹಾರ ಕಂಡುಕೊಳ್ಳಲು ಈ ಬಾರಿಯೂ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಮಾ.30ರಿಂದ ಎ.4ರ ವರೆಗೆ ಪ್ರತಿದಿನ 9ರಿಂದ ಮಧ್ಯಾಹ್ನ 2:30ರ ವರೆಗೆ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ವಿದ್ಯಾರ್ಥಿಗಳು 080-2331 0075, 080-2331 0076 ಈ ಸಂಖ್ಯೆಗೆ ಪೋಷಕರು, ವಿದ್ಯಾರ್ಥಿಗಳು ರವಿವಾರ ಹಾಗೂ ಸರಕಾರಿ ರಜಾದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಂದು ಕರೆಮಾಡಿ ತಮ್ಮ ಸಮಸ್ಯೆಗಳಿಗೆ, ಸಂದೇಹಗಳಿಗೆ ಪರಿಹಾರ ಪಡೆದುಕೊಳ್ಳಬಹುದು ಎಂದು ಪ್ರೌಢ ಶಿಕ್ಷಣ ಮಂಡಳಿ ಪ್ರಕಟನೆ ತಿಳಿಸಿದೆ.







