ಅಝಾನ್ ಕೇಳಿ ಭಾಷಣ ನಿಲ್ಲಿಸಿದ ಪ್ರಧಾನಿ ಮೋದಿ

ಖರಗಪುರ, ಮಾ.27: ಪಶ್ಚಿಮಬಂಗಾಳದ ಖರಗಪುರದಲ್ಲಿ ರವಿವಾರ ರ್ಯಾಲಿಯೊಂದರ ವೇಳೆ ಹತ್ತಿರದ ಮಸೀದಿಯೊಂದರಿಂದ ಅಝಾನ್ ಕೇಳಿಸಿದೊಡನೆಯೇ ಪ್ರಧಾನಿ ನರೇಂದ್ರ ಮೋದಿ ತನ್ನ ಭಾಷಣ ನಿಲ್ಲಿಸುವ ಮೂಲಕ ಉದಾರ ನಡೆ ತೋರಿಸಿದ್ದಾರೆ.
ತನ್ನ ಭಾಷಣದಲ್ಲಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಮೋದಿ, ‘‘ಅಝಾನ್ (ಪ್ರಾರ್ಥನೆ ಕರೆ) ಆರಂಭವಾಗಿದೆ. ನಮ್ಮಿಂದಾಗಿ ಯಾರದೇ ಪ್ರಾರ್ಥನೆಗೆ ಯಾವುದೇ ತೊಂದರೆಯಾಗಬಾರದು. ಅದಕ್ಕಾಗಿ ನಾನು ಕೆಲವು ಕ್ಷಣ ಭಾಷಣ ನಿಲ್ಲಿಸಿದೆ’’ ಎಂದು ಬಳಿಕ ಹೇಳಿದರು.
ತಾನು ಅಭಿವೃದ್ಧಿ, ತ್ವರಿತ ಅಭಿವೃದ್ಧಿ ಹಾಗೂ ಎಲ್ಲ ಮಗ್ಗುಲುಗಳಲ್ಲಿ ಅಭಿವೃದ್ಧಿ ಎಂಬ 3 ಕಾರ್ಯಸೂಚಿಗಳನ್ನು ಇರಿಸಿಕೊಂಡಿದ್ದೇನೆ.
ತಾವು ಅಧಿಕಾರಕ್ಕೆ ಬಂದಮೇಲೆ ಯಾವುದೇ ಭ್ರಷ್ಟಾಚಾರದ ಬಗ್ಗೆ ಕೇಳಿದ್ದೀರಾ? ಹಸಿದಾದರೂ ಇರುವುದನ್ನು ಇಚ್ಛಿಸುತ್ತೇವೆ. ಆದರೆ ಜನತೆಯ ಕಿಸೆಯಿಂದ ಒಂದು ಪೈಸೆಯನ್ನೂ ಕಳ್ಳತನ ಮಾಡೆವೆಂದು ಪ್ರಧಾನಿ ಹೇಳಿದರು.
ಒಂದು ಕಾಲದಲ್ಲಿ ಬಂಗಾಳ ಕೈಗಾರಿಕೆಗಳ ರಾಜಧಾನಿಯಾಗಿತ್ತು. ಎಡಪಕ್ಷೀಯರು ಅದರ ಬೆನ್ನು ಮೂಳೆ ಮುರಿದರು ಹಾಗೂ ಈಗಿನ ಸರಕಾರ ಅದನ್ನು ಸಮಾಧಿ ಮಾಡಿತೆಂದು ಅವರು ಟೀಕಿಸಿದರು.
ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಕೇರಳದಲ್ಲಿ ಅಧಿಕಾರಕ್ಕಾಗಿ ಬಡಿದಾಡುತ್ತಿದ್ದಾರೆ. ಆದರೆ, ಬಂಗಾಳದಲ್ಲಿ ಅವರು ಕೈಜೋಡಿಸಿದ್ದಾರೆ. ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಬಂಗಾಳದ ಬುದ್ಧಿವಂತಿಕೆಗೆ ಸವಾಲು ಹಾಕಿದ್ದಾರೆ. ಅಂತಹವರನ್ನು ಬಂಗಾಳ ಕ್ಷಮಿಸಲಾರದೆಂದು ಮೋದಿ ಹೇಳಿದರು.
ಬಂಗಾಳದಲ್ಲಿ ಬಿಜೆಪಿ ಹೇಗೆ ಸರಕಾರ ರಚಿಸಬಲ್ಲದೆಂದು ಕೆಲವರು ಯೋಚಿಸುತ್ತಿದ್ದಾರೆ. ಆದರೆ, ಬಂಗಾಳದ ಜನರು ನಿರ್ಧರಿಸಿದರೆ ಸುಲಭದಲ್ಲಿ ಸರಕಾರ ರಚಿಸಲು ಸಾಧ್ಯವೆಂದು ಅವರು ಅಭಿಪ್ರಾಯಿಸಿದರು.







