ಎಂ.ಫ್ರೆಂಡ್ಸ್ ದುಬೈ ಮಿಲನ-2016

ದುಬೈ ದೇರಾ ರಾಫಿ ಹೋಟೆಲ್ ನಲ್ಲಿ ಮಂಗಳೂರು ಎಂ. ಫ್ರೆಂಡ್ಸ್ ಟ್ರಸ್ಟ್ ಬಳಗವು ಶುಕ್ರವಾರ ಹಮ್ಮಿಕೊಂಡಿದ್ದ ‘ದುಬೈ ಮಿಲನ 2016’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಜ್ಯ ಆರೋಗ್ಯ ಸಚಿವ ಯುಟಿ ಖಾದರ್ ಅವರು ಮಾತನಾಡಿ ಆಧುನಿಕ ಯುಗದಲ್ಲಿ ಹೆಚ್ಚಿನವರು ತಂತ್ರಜ್ಞಾನ ಮತ್ತು ಯುವಶಕ್ತಿಯನ್ನು ಸದುಪಯೋಗ ಮಾಡುವ ಬದಲು ದುರ್ಬಳಕೆ ಮಾಡುತ್ತಾ ಇರುವ ಈ ಸಂದರ್ಭದಲ್ಲಿ ಯುವಕರ ಮಧ್ಯೆ ಕೇವಲ ಬೆರಳೆಣಿಕೆಯಷ್ಟು ಮಂದಿಯನ್ನು ಸೇರಿಸಿಕೊಂಡು ವಾಟ್ಸಪ್ ಗ್ರೂಪ್ ಮಾಡಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಎಂ ಫ್ರೆಂಡ್ಸ್ ಹಲವು ಜೀವ ಕಾರುಣ್ಯದ ಸೇವೆಗಳಿಗೆ ಪಣ ತೊಟ್ಟಿರುವುದು ತಂತ್ರಜ್ಞಾನ ಮತ್ತು ಯುವ ಶಕ್ತಿಯನ್ನು ಹೇಗೆ ಒಳ್ಳೆಯ ಕಾರ್ಯಗಳಿಗೆ ಉಪಯೋಗಿಸಬಹುದು ಎಂಬುವುದನ್ನು ಎತ್ತಿ ತೋರಿಸುತ್ತದೆ ಎಂದರು.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಕರ್ನಾಟಕದ ನಿವೃತ್ತ ಲೋಕಾಯುಕ್ತ ಜಸ್ಟಿಸ್ ಎನ್.ಸಂತೋಷ್ ಹೆಗ್ಡೆ ಅವರು ಮಾತನಾಡಿ ಭಾರತದಲ್ಲಿ ಸಂವಿಧಾನ ರೂಪುಗೊಂಡು ಮೊದ ಮೊದಲ ಸರಕಾರದಿಂದ ಜಾರಿಗೆ ತರಲು ಉದ್ದೇಶಿತ ಯೋಜನೆಗಳು ಬಹಳ ಸುಲಭದಲ್ಲಿ ಅಂಗೀಕಾರವಾಗುತ್ತಿತ್ತು ಆಗ ಶಿಕ್ಷಣದ ಕೊರೆತೆ ಕೂಡ ಇತ್ತು ಆದರೆ ಇವತ್ತು ಆಡಳಿತ ನಡೆಸುವವರು ವಿದ್ಯಾವಂತರಾಗಿಯೂ ಒಂದು ಪಕ್ಷದ ಅಧೀನದಲ್ಲಿರುವ ಕೇಂದ್ರ ಸರಕಾರ ಯೋಜನೆಯನ್ನು ಜಾರಿಗೆ ತರಲು ಮುಂದಾದರೆ ಅದನ್ನು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ತಡೆ ಹಿಡಿಯುತ್ತದೆ. ಸರಕಾರ ಎನ್ನುವಂತದ್ದು ಸಾರ್ವಜನಿಕರ ಆಸ್ತಿ ಎಂಬುವುದನ್ನು ಆಡಳಿತವರ್ಗ ಮರೆತಂತೆ ಕಾಣುತ್ತದೆ ಎಂದರು.
ಇನ್ನೋರ್ವ ಅತಿಥಿ ರಾಜ್ಯದ ಅರಣ್ಯ ಸಚಿವ ಬಿ ರಮಾನಾಥ ರೈ ಮಾತನಾಡಿ ಸಾರ್ವಜನಿಕ ಸೇವೆಯಲ್ಲಿರುವವರು ಸಮಾಜದ ಎಲ್ಲಾ ವರ್ಗದ ಜನರನ್ನು ಸೇರಿಸಿಕೊಂಡು ಸಮಾಜದಲ್ಲಿರುವ ಆರ್ಥಿಕ ಸ್ಥಿತಿಯಿಂದ ಹದಗೆಟ್ಟಿರುವ ಜನರ ಮೇಲೆ ಸಹಕಾರಿ ಮನೋಭಾವ ಬೆಳೆಸಿದಾಗ ಎಲ್ಲಾ ಧರ್ಮದವರು ಸಾಮರಸ್ಯದಿಂದ ಕೂಡಿ ಬದುಕಲು ಸಾಧ್ಯ ಎಂದರಲ್ಲದೆ ನಮ್ಮ ಹಿರಿಯರ ಹಿನ್ನಲೆ ಏನು ಅವರು ಎಂತಹ ಕಠಿಣ ಪರಿಸ್ಥಿತಿಯನ್ನು ಅನುಭವಿಸಿದ್ದಾರೆ ಎಂಬುವುದನ್ನು ಅರಿತುಕೊಂಡು ಅದನ್ನು ತಮ್ಮ ಜೀವನದಲ್ಲಿ ರೂಡಿಸಿಕೊಂಡು ಬದುಕಬೇಕು ಹೊರತು ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡುವ ಕಾರ್ಯಗಳಿಗೆ ಕೈ ಹಾಕಬಾರದು ಎಂದು ಹೇಳಿದರು.
ಕೆ.ಎಸ್.ಎ ಅಮಾಕೋ ಗ್ರೂಪ್ ಆಫ್ ಕಂಪೆನಿಯ ಚೆಯರ್ಮನ್ ಆಸಿಫ್ ಅಮಾಕೋ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಂ ಫ್ರೆಂಡ್ಸ್ ಸೇವಾ ಕಾರ್ಯಗಳಿಗೆ ಬೆಂಬಲ ಸೂಚಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ವೇಳೆ ದುಬೈ ಅಲ್ ಫಲಾಹ್ ಗ್ರೂಪ್ ಆಫ್ ಹೋಟೆಲ್ಸ್ ಇದರ ಆಡಳಿತ ನಿರ್ದೇಶಕ ಯೂಸುಫ್ ಎಸ್. ಅವರಿಗೆ ಎಂ ಫ್ರೆಂಡ್ಸ್ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಎಂ.ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಸ್ವಾಗತಿಸಿದರು. ಕಾರ್ಯದರ್ಶಿ ರಶೀದ್ ವಿಟ್ಲ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಸೈಫ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು. ಹನೀಫ್ ಪುತ್ತೂರು ವಂದಿಸಿದರು.
ಕಾರ್ಯಕ್ರಮದಲ್ಲಿ ದುಬೈ ಆಲಿಯ ಅಲ್ ಹಬ್ತೂರ್ ಎಂ.ಡಿ ಇಕ್ಬಾಲ್ ಅಬ್ದುಲ್ ಹಮೀದ್, ಕಾಸರಗೋಡು ಮುನ್ಸಿಪಲ್ ಮಾಜಿ ಚೇರ್ಮನ್ ಅಬ್ದುಲ್ಲ ಕುಂಞ್ಞಿ, ರಶೀದ್ ಹಾಜಿ ಬೆಳ್ಳಾರೆ, ಅಬ್ದುಲ್ಲಾ ಮದುಮೂಲೆ, ಬಿ.ಡಬ್ಲು.ಎಫ್ ಮಹಮ್ಮದ್ ಅಲಿ ಉಚ್ಚಿಲ, ಸಲೀಂ ಅಲ್ತಾಫ್ ಫರಂಗಿಪೇಟೆ, ಝೈನುದ್ದೀನ್ ಬೆಳ್ಳಾರೆ, ಬಶೀರ್ ಬೊಳ್ವಾರ್, ತಾಯ್ನಾಡಿನಿಂದ ಆಗಮಿಸಿದ ಎಂ ಫ್ರೆಂಡ್ಸ್ ತಂಡದ ಹನೀಫ್ ಅಲ್ ಫಲಾಹ್, ವಿ.ಎಚ್ ಅಶ್ರಫ್ ವಿಟ್ಲ, ಕಲಂದರ್, ಅಬ್ಬಾಸ್ ಉಕ್ಕುಡ ಹಾಗೂ ಯುಎಇ ಪ್ರತಿನಿಧಿಗಳಾದ ಹನೀಫ್ ಪುತ್ತೂರು ಅಬುಧಾಬಿ, ಹಾರಿಸ್ ಕಾಂತಡ್ಕ ಅಬುಧಾಬಿ, ನವಾಝ್ ಕೆ ದುಬೈ, ಮಹಮ್ಮದ್ ಶರೀಫ್ ಕೆ ಅಜ್ಮಾನ್ ಮೊದಲಾದವರು ಉಪಸ್ಥಿತರಿದ್ದರು.







