ಟ್ವೆಂಟಿ-20 ವಿಶ್ವ ದಾಖಲೆ ಮುರಿದ ವಿರಾಟ್ ಕೊಹ್ಲಿ

ಮೊಹಾಲಿ, ಮಾ.28: ಆಸ್ಟ್ರೇಲಿಯ ವಿರುದ್ಧ ವಿಶ್ವಕಪ್‌ನ ಸೂಪರ್-10 ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳಿಂದ ಗೆಲುವು ಸಾಧಿಸಿ ಸೆಮಿ ಫೈನಲ್‌ಗೆ ತಲುಪಿದ್ದು, ವಿರಾಟ್ ಕೊಹ್ಲಿ ಅವರ ಸ್ಫೋಟಕ ಬ್ಯಾಟಿಂಗ್(51 ಎಸೆತ, ಔಟಾಗದೆ 82)ಪಂದ್ಯದ ಆಕರ್ಷಣೆಯಾಗಿತ್ತು. ಆಸೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ದಿಲ್ಲಿ ದಾಂಡಿಗ ಕೊಹ್ಲಿ ಹಲವು ರಾಷ್ಟ್ರ ಹಾಗೂ ವಿಶ್ವ ದಾಖಲೆಯನ್ನು ಮುರಿದರು.
ಕೊಹ್ಲಿ ಅವರ ಅತ್ಯುತ್ತಮ ಪ್ರದರ್ಶನದ ಮುಂದೆ ಆಫ್-ಸ್ಪಿನ್ನರ್ ಆರ್.ಅಶ್ವಿನ್ ಸಾಧನೆಯೂ ಮಂಕಾಗಿ ಹೋಯಿತು. ಅಶ್ವಿನ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 50 ವಿಕೆಟ್ ಪೂರ್ಣಗೊಳಿಸಿದ ಭಾರತದ ಮೊದಲ ಬೌಲರ್ ಎನಿಸಿಕೊಂಡರು. ಆಸೀಸ್ ವಿರುದ್ಧ 1 ವಿಕೆಟ್ ಪಡೆದಿದ್ದ ಅಶ್ವಿನ್ ತನ್ನ 42ನೆ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.
ಕೊಹ್ಲಿ ಹಾಗೂ ಭಾರತದ ಉಳಿದ ಆಟಗಾರರ ಕೆಲವು ಪ್ರಮುಖ ಮೈಲುಗಲ್ಲುಗಳು ಈ ಕೆಳಗಿನಂತಿವೆ.
* ಆಸ್ಟ್ರೇಲಿಯ ವಿರುದ್ಧ 51 ಎಸೆತಗಳಲ್ಲಿ 82 ರನ್ ಗಳಿಸಿದ ಕೊಹ್ಲಿ ತವರು ನೆಲದಲ್ಲಿ ಟ್ವೆಂಟಿ-20 ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಟ್ವೆಂಟಿ-20ಯಲ್ಲಿ 2ನೆ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಜ.26, 2016ರಲ್ಲಿ ಆಸ್ಟ್ರೇಲಿಯದ ವಿರುದ್ಧವೇ ಅಡಿಲೇಡ್‌ನಲ್ಲಿ ಔಟಾಗದೆ 90 ರನ್ ಗಳಿಸಿದ್ದರು.
* ಟ್ವೆಂಟಿ-20ಯ ಯಶಸ್ವಿ ಚೇಸಿಂಗ್‌ನ ವೇಳೆ ಕೊಹ್ಲಿ ಗರಿಷ್ಠ ಸ್ಕೋರ್ ದಾಖಲಿಸಿದರು. ಈ ಮೂಲಕ ತನ್ನದೇ ದಾಖಲೆಯನ್ನು ಸರಿಗಟ್ಟಿದರು. ಕೊಹ್ಲಿ ಸೆ.30,2012ರಲ್ಲಿ ಕೊಲಂಬೊದಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಟ್ವೆಂಟಿ-20 ವಿಶ್ವಕಪ್‌ನಲ್ಲಿ 61 ಎಸೆತಗಳಲ್ಲಿ ಔಟಾಗದೆ 78 ರನ್ ಗಳಿಸಿದ್ದರು.
* ಯಶಸ್ವಿಯಾಗಿ ರನ್ ಬೆನ್ನಟ್ಟಿದ ಪಂದ್ಯಗಳಲ್ಲಿ ಕೊಹ್ಲಿ ಅತ್ಯುತ್ತಮ ಸರಾಸರಿ (122.83) ಕಾಯ್ದುಕೊಂಡಿದ್ದಾರೆ. ಕೊಹ್ಲಿ 15 ಇನಿಂಗ್ಸ್‌ಗಳಲ್ಲಿ 8 ಅರ್ಧಶತಕಗಳ ಸಹಿತ 737 ರನ್ ಗಳಿಸಿದ್ದಾರೆ. ಈ ಎರಡೂ ಸಾಧನೆ ಟ್ವೆಂಟಿ-20ಯಲ್ಲಿನ ದಾಖಲೆಗಳಾಗಿವೆ.
* ಕೊಹ್ಲಿ ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ-20 ಪಂದ್ಯದಲ್ಲಿ ಸತತ ನಾಲ್ಕನೆ ಬಾರಿ ಅರ್ಧಶತಕ ಬಾರಿಸಿದ್ದಾರೆ. ಜ.26,2016ರಲ್ಲಿ ಅಡಿಲೇಡ್‌ನಲ್ಲಿ ಔಟಾಗದೆ 90, ಜ.29ರಂದು ಮೆಲ್ಬೋರ್ನ್‌ನಲ್ಲಿ ಔಟಾಗದೆ 59, ಜ.31ರಂದು ಸಿಡ್ನಿಯಲ್ಲಿ 50 ಹಾಗೂ ಮಾ.27 ರಂದು ಮೊಹಾಲಿಯಲ್ಲಿ ಔಟಾಗದೆ 82 ರನ್ ಗಳಿಸಿದ್ದಾರೆ.
* ಕೊಹ್ಲಿ ಈ ವರ್ಷ ಆಸ್ಟ್ರೇಲಿಯದ ವಿರುದ್ಧ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 8ನೆ ಬಾರಿ 50ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಡೆಸ್ಮಂಡ್ ಹೇನ್ಸ್(14 ಬಾರಿ, 1984ರಲ್ಲಿ) ಅತ್ಯಂತ ಹೆಚ್ಚು ಬಾರಿ ಅರ್ಧಶತಕ ಬಾರಿಸಿದ್ದಾರೆ.
*ಟ್ವೆಂಟಿ-20ಯಲ್ಲಿ 15ನೆ ಬಾರಿ 50 ಪ್ಲಸ್ ಸ್ಕೋರ್ ದಾಖಲಿಸಿದ ಕೊಹ್ಲಿ ಅವರು ಕ್ರಿಸ್ ಗೇಲ್(2 ಶತಕ, 13 ಅರ್ಧಶತಕ) ಹಾಗೂ ಬ್ರೆಂಡನ್ ಮೆಕಲಮ್(2 ಶತಕ, 13 ಅರ್ಧಶತಕ)ಸಾಧನೆಯನ್ನು ಸರಿಗಟ್ಟಿದರು.
* ಕೊಹ್ಲಿ 9ನೆ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಪಾಕ್‌ನ ಶಾಹಿದ್ ಅಫ್ರಿದಿ(11) ಅತ್ಯಂತ ಹೆಚ್ಚು ಬಾರಿ ಪಂದ್ಯಪುರುಷ ಗೌರವಕ್ಕೆ ಪಾತ್ರರಾಗಿದ್ದರು.
*ಕೊಹ್ಲಿ ಆಸ್ಟ್ರೇಲಿಯ ವಿರುದ್ಧ ಆಡಿರುವ 9 ಪಂದ್ಯಗಳ ಪೈಕಿ ಮೂರು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಈ ಮೂಲಕ ಆಸೀಸ್‌ನ ವಿರುದ್ಧ ತಲಾ 2 ಬಾರಿ ಪಂದ್ಯಶ್ರೇಷ್ಠ ಪಡೆದಿದ್ದ ಕ್ರಿಸ್‌ಗೇಲ್, ಉಮರ್ ಅಕ್ಮಲ್ ಹಾಗೂ ಯುವರಾಜ್ ಸಿಂಗ್ ದಾಖಲೆಯನ್ನು ಮುರಿದಿದ್ದಾರೆ.
*ಕೊಹ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಕೇವಲ 39 ಇನಿಂಗ್ಸ್‌ಗಳಲ್ಲಿ 1500 ರನ್ ಪೂರೈಸಿದ್ದಾರೆ. ಈ ಮೂಲಕ ಕ್ರಿಸ್ ಗೇಲ್(44 ಇನಿಂಗ್ಸ್) ಸಾಧನೆಯನ್ನು ಹಿಂದಿಕ್ಕಿದ್ದಾರೆ.ಚುಟುಕು ಪಂದ್ಯದಲ್ಲಿ ವೇಗವಾಗಿ 1500 ರನ್ ಪೂರೈಸಿದ ಮೊದಲ ದಾಂಡಿಗ ಕೊಹ್ಲಿ.
*ಕೊಹ್ಲಿ ಟ್ವೆಂಟಿ-20ಯಲ್ಲಿ ಗರಿಷ್ಠ ಬೌಂಡರಿಗಳನ್ನು(508) ಬಾರಿಸಿದ ಭಾರತದ ಮೂರನೆ ದಾಂಡಿಗನಾಗಿದ್ದಾರೆ. ಗೌತಮ್ ಗಂಭೀರ್ ಹಾಗೂ ಸುರೇಶ್ ರೈನಾ 500ಕ್ಕೂ ಅಧಿಕ ಬೌಂಡರಿ ಬಾರಿಸಿದ್ದಾರೆ.
*ಅಶ್ವಿನ್ ಟ್ವೆಂಟಿ-20ಯಲ್ಲಿ 50 ವಿಕೆಟ್ ಪಡೆದ ಭಾರತದ ಮೊದಲ ಆಟಗಾರ ಎನಿಸಿಕೊಂಡರು. ಈ ಮೈಲುಗಲ್ಲು ತಲುಪಿದ ವಿಶ್ವದ 12ನೆ ಬೌಲರ್, 7ನೆ ಸ್ಪಿನ್ನರ್ ಆಗಿದ್ದಾರೆ.
*ಭಾರತ ತಂಡ ಆಸ್ಟ್ರೇಲಿಯ ವಿರುದ್ಧ ಭಾರತದಲ್ಲಿ ಆಡಿರುವ ಮೂರೂ ಪಂದ್ಯಗಳನ್ನು ಜಯಿಸಿದೆ. 2007ರಲ್ಲಿ ಮುಂಬೈನಲ್ಲಿ 7 ವಿಕೆಟ್ ಅಂತರದಿಂದ ಹಾಗೂ 2013ರಲ್ಲಿ ರಾಜ್‌ಕೋಟ್‌ನಲ್ಲಿ 6 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.
*ಭಾರತ ಟಿ-20ಯಲ್ಲಿ ಅ.10, 2013 ಹಾಗೂ ಮಾ.27, 2016ರ ನಡುವೆ ಸತತ 6ನೆ ಬಾರಿ ಆಸ್ಟ್ರೇಲಿಯವನ್ನು ಮಣಿಸಿದ ಸಾಧನೆ ಮಾಡಿತು. ಈ ಮೂಲಕ ಇಂಗ್ಲೆಂಡ್ ಸಾಧನೆ ಸರಿಗಟ್ಟಿತು. ಇಂಗ್ಲೆಂಡ್ 2008ರಿಂದ 2013ರ ತನಕ ನ್ಯೂಝಿಲೆಂಡ್ ವಿರುದ್ಧ ಸತತ 6 ಪಂದ್ಯ ಗೆದ್ದುಕೊಂಡಿತ್ತು.
* ಭಾರತ ತಂಡ ಆಸ್ಟ್ರೇಲಿಯ ವಿರುದ್ಧ ಆಡಿರುವ 13 ಟಿ-20 ಪಂದ್ಯಗಳ ಪೈಕಿ 9ನೆ ಜಯ ಸಾಧಿಸಿದೆ. ಯಶಸ್ಸಿನ ಸರಾಸರಿ 69.23.
*ಎಂಎಸ್ ಧೋನಿ 67 ಪಂದ್ಯಗಳಲ್ಲಿ 60 ಬಲಿ (39 ಕ್ಯಾಚ್+21 ಸ್ಟಂಪಿಂಗ್) ಪಡೆದಿದ್ದಾರೆ. ಈ ಮೂಲಕ ಪಾಕಿಸ್ತಾನದ ಕಮ್ರಾನ್ ಅಕ್ಮಲ್ ದಾಖಲೆ(60-28ಕ್ಯಾಚ್+32 ಸ್ಟಂಪಿಂಗ್) ಸರಿಗಟ್ಟಿದರು.
*ಧೋನಿ ಹಾಗೂ ಕೊಹ್ಲಿ ಆಸ್ಟ್ರೇಲಿಯದ ವಿರುದ್ಧ 5ನೆ ವಿಕೆಟ್‌ಗೆ 2ನೆ ಗರಿಷ್ಠ ಜೊತೆಯಾಟ(ಔಟಾಗದೆ 67) ನಡೆಸಿದರು. ಧೋನಿ-ಯುವರಾಜ್ 2014ರಲ್ಲಿ ಢಾಕಾದಲ್ಲಿ 84 ರನ್ ಸೇರಿಸಿದ್ದರು.







