ಹಾರಾಟಕ್ಕೆ ಮುನ್ನ ಶರಾಬು ಅಮಲಿನಲ್ಲಿದ್ದ ಪೈಲಟ್ ಬಂಧನ

ಡೆಟ್ರಾಯಿಟ್, ಮಾ. 28: ಶರಾಬು ಕುಡಿದಿದ್ದಾರೆಯೇ ಎಂಬುದನ್ನು ಪತ್ತೆಹಚ್ಚುವ ‘ಬ್ರೀದಲೈಸರ್’ ಪರೀಕ್ಷೆಯಲ್ಲಿ ವಿಫಲರಾದ ಅಮೆರಿಕನ್ ಏರ್‌ಲೈನ್ಸ್‌ನ ಪೈಲಟೊಬ್ಬರನ್ನು ಡೆಟ್ರಾಯಿಟ್ ಮೆಟ್ರೊಪಾಲಿಟನ್ ವಿಮಾನ ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರ ಎದುರಿನಲ್ಲೇ ಬಂಧಿಸಿದ ಘಟನೆ ಶನಿವಾರ ನಡೆದಿದೆ.
ಬಳಿಕ, ಡೆಟ್ರಾಯಿಟ್‌ನಿಂದ ಫಿಲಡೆಲ್ಫಿಯಕ್ಕೆ ಬೆಳಗ್ಗೆ 7 ಗಂಟೆಗೆ ಹೊರಡಬೇಕಿದ್ದ ವಿಮಾನ 736ನ್ನು ತಕ್ಷಣ ರದ್ದುಪಡಿಸಲಾಯಿತು.
ಪೈಲಟ್ ಅಹಜವಾಗಿ ವರ್ತಿಸುತ್ತಿದ್ದುದನ್ನು ಪ್ರಯಾಣ ಭದ್ರತಾ ಸಿಬ್ಬಂದಿಯೊಬ್ಬರು ನೋಡಿ ವರದಿ ಮಾಡಿದರು. ವಿಮಾನ ಹಾರಾಟ ನಡೆಸಲು ನಿಮಿಷಗಳಿರುವಾಗ ವಿಮಾನ ನಿಲ್ದಾಣದ ಪೊಲೀಸರನ್ನು ಕರೆಸಲಾಯಿತು.
ಪ್ರಥಮ ಬ್ರೀದಲೈಸರ್ ಪರೀಕ್ಷೆಯಲ್ಲಿ ಪೈಲಟ್ ವಿಫಲನಾದನು ಎಂದು ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರು ತಿಳಿಸಿದರು. ಬಂಧನದ ಬಳಿಕ ಎರಡನೆ ಪರೀಕ್ಷೆ ನಡೆಸಲಾಯಿತು. ಅದರಲ್ಲೂ ಆತ ವಿಫಲನಾದನು.
Next Story





