ಕಾರ್ಕಳ : 4 ಲಕ್ಷ ರೂ. ಮೌಲ್ಯದ 146.050ಗ್ರಾಂ ಚಿನ್ನ ವಶ, ಮೂವರ ಬಂಧನ
ಹಳೆ ಐದು ಪ್ರಕರಣ ಬೇಧಿಸಿದ ಪೊಲೀಸರು.

ಕಾರ್ಕಳ : ಹಳೆ ಐದು ಪ್ರಕರಣಗಳನ್ನು ಬೇಧಿಸಿದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ 4 ಲಕ್ಷ ರೂ. ಮೌಲ್ಯದ 146.050ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.
ಪ್ರಸ್ತುತ ಜೋಡುರಸ್ತೆ ಹಿಮ್ಮಂಜೆ ಬಳಿ ವಾಸವಾಗಿರುವ ಮೂಡುಗೆರೆ ಮತ್ತು ಚಿಕ್ಕಮಗಳೂರು ಮೂಲದ ನಿವಾಸಿಗಳಾದ ಆನಂದ (34), ರತ್ನ (38) ಮತ್ತು ಮಧುರ(30) ಬಂಧಿತ ಆರೋಪಿಗಳು. ಆರೋಪಿ ಆನಂದ ಗುಜುರಿ ಹೆಕ್ಕುವ ಕೆಲಸದಲ್ಲಿ ನಿರತನಾಗಿದ್ದು, ಮನೆಮನೆಗೆ ಗುಜುರಿ ಸಂಗ್ರಹಕ್ಕೆ ತೆರಳುವ ಕಾಯಕ ನಿರ್ವಹಿಸುತ್ತಿದ್ದಾನೆ. ಅದೇ ವೇಳೆ ಮನೆಯ ವಾತಾವರಣಗಳ ಬಗ್ಗೆ ಮಾಹಿತಿಯೂ ಕಲೆ ಹಾಕುತ್ತಾ, ಬಳಿಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕನ್ನ ಹಾಕಿದ್ದ. ಅಲ್ಲಿದ್ದ ಚಿನ್ನಭಾರಣಗಳನ್ನು ಎಗರಿಸಿದ್ದ. ಅಲ್ಲದೆ ಇಬ್ಬರು ಮಹಿಳೆಯರ ಹೆಸರಿನಲ್ಲಿ ಬ್ಯಾಂಕಿನ ಠೇವಣಿಯಿಟ್ಟು ಹಣ ಪಡೆದುಕೊಂಡಿದ್ದ. ಪ್ರಕರಣಗಳು : 2012ರಲ್ಲಿ ಕುಕ್ಕುಂದೂರು ಗ್ರಾಮದ ರಮ ಆಚಾರ್ಯ, 2014ರಲ್ಲಿ ಮುಂಡ್ಕೂರು ಗ್ರಾಮದ ಶೃತಿ ಶೆಟ್ಟಿಗಾರ್, ನಿಟ್ಟೆ ಗ್ರಾಮದ ಸುಮ ಮಧುಸೂಧನ್, 2015ರಲ್ಲಿ ಮುಡಾರು ಗ್ರಾಮದ ಬಜಗೋಳಿ ಗುರ್ಗಾಲ್‌ಗುಡ್ಡೆ ರಮೇಶ್ ಮತ್ತು ನಿಟ್ಟೆ ಗ್ರಾಮದ ಶ್ರೀರಾಮನಗರದ ಸೀತಾರಾಮ ಶೆಟ್ಟಿ ಮಉಂತಾದವರ ಮನೆಗೆ ಕನ್ನ ಹಾಕಲಾಗಿತ್ತು.
ಕಾರ್ಕಳ ಎಎಸ್‌ಪಿ ಡಾ.ಸುಮನ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಗುಪ್ತ ವಾರ್ತಾ ವಿಭಾಗದ ಪೊಲೀಸ್ ನಿರೀಕ್ಷಕ ಟಿ.ಆರ್.ಜೈಶಂಕರ್, ಎಎಸ್‌ಐ ರೊಸಾರಿಯೋ ಡಿಸೋಜಾ, ಸುರೇಶ್, ರಾಮು ಹೆಗ್ಡೆ, ಚಂದ್ರ ಶೆಟ್ಟಿ, ರವಿಚಂದ್ರ, ರಾಘವೇಂದ್ರ, ಶಿವಾನಂದ, ರಾಜ್ ಕುಮಾರ್, ದಯಾನಂದ ಪ್ರಭು, ಪ್ರವೀಣ್ ಮತ್ತು ಚಾಲಕ ರಾಘವೇಂದ್ರ, ನವೀನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ಎಸ್ಪಿ ಶ್ಲಾಘನೆ:
"ಸಿ" ರಿಪೋರ್ಟ್ ಹಾಕಲಾದ ಹಳೇ ಪ್ರಕರಣವನ್ನು ಇದೀಗ ಪೊಲೀಸರ ತಂಡ ಬೇಧಿಸಿದ್ದು, ಎಎಸ್‌ಪಿ ಡಾ. ಸುಮನ ನೇತೃತ್ವದ ತಂಡವನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹೇಳಿದ್ದಾರೆ.
ಅವರು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೊಲೀಸ್ ತಂಡಕ್ಕೆ 10 ಸಾವಿರ ರೂ. ವಿಶೇಷ ಬಹುಮಾನವನ್ನು ಈ ಸಂದರ್ಭ ಘೋಷಿಸಿದರು. ಜಿಲ್ಲೆಯಲ್ಲಿ ಕಾನೂನು ಬಾಹಿರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಜಿಲ್ಲೆಯಲ್ಲಿ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ 15 ಕಡೆಗಳಲ್ಲಿ ಪೊಲೀಸ್ ಚೆಕ್‌ಪೋಸ್ಟ್ ನಿರ್ಮಿಸಿ ಚುನಾವಣಾ ಸಂದರ್ಭ ನಡೆಸುವ ಕರ್ಯಾಚರಣೆಯಂತೆ ಇದೀಗ ನಡೆಸಲಾಗುತ್ತಿದೆ. ದೇವಳಗಳ ಕಳವು ಪ್ರಕರಣಗಳು ಕಾರ್ಕಳದಲ್ಲಿ ಹೆಚ್ಚಿದ್ದು, ಈ ಬಗ್ಗೆಯೂ ಇಲಾಖೆ ನಿಗಾ ವಹಿಸಿದೆ. ಶಿರ್ಲಾಲು ಬಸದಿ ಕಳವು ಬಗ್ಗೆ ಕೆಲವೊಂದು ಮಾಹಿತಿಗಳು ನಮಗೆ ಲಭಿಸಿದ್ದು, ಕೂಡಲೇ ಆ ಪ್ರಕರಣವನ್ನು ಬೇಧಿಸುವುದಾಗಿ ಎಸ್ಪಿ ಭರವಸೆ ವ್ಯಕ್ತಪಡಿಸಿದರು.
ಬೆಳ್ಮಣ್ಣುನಲ್ಲಿರುವ ಪಬ್ ಬಗ್ಗೆ ಸಾಕಾಷ್ಟು ದೂರುಗಳು ಬಂದಿದ್ದು, ಅದರ ಪರವಾನಿಗೆಯನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಲಾಗಿದೆ. ಬಂಡೀಮಠ ಬಸ್ಸು ನಿಲ್ದಾಣದ ಬಳಕೆಯ ಬಗ್ಗೆ ಆರ್‌ಟಿಒ ಜತೆ ಸಭೆ ನಡೆಸಿ ತಪ್ಪಿದಸ್ಥ ಬಸ್ಸು ಚಾಲಕ/ಮಾಲಿಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು. ಪೊಟೋಕ್ಯಾಪ್ಶನ್ : ಬಂಧಿತ ಆರೋಪಿಗಳ ಜತೆ ಪೊಲೀಸರ ತಂಡ







