ಸ್ವಾಮಿಗಿಂತ ಸ್ವಾಮಿಯ ಅಣಕ ಪುಟಕ್ಕೇ ಭಾರೀ ಡಿಮ್ಯಾಂಡ್ !
ಡಿಲೀಟ್ ಆದ ಪುಟಕ್ಕೆ ಮತ್ತೆ ಅವಕಾಶ ನೀಡಲು ಫೇಸ್ ಬುಕ್ ಗೆ ಮನವಿ

ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮೀ ಅವರ ಹೆಸರಿರುವ ಎರಡು ಫೇಸ್ ಬುಕ್ ಪುಟಗಳನ್ನು ಫೇಸ್ ಬುಕ್ ಕಿತ್ತು ಹಾಕಿದೆ. ಅದರಲ್ಲಿ ಒಂದು ಅನಾಮಿಕನೊಬ್ಬ ನಡೆಸುತ್ತಿರುವ ಹಾಗು ಸಾಕಷ್ಟು ಪ್ರಸಿದ್ಧಿ ಪಡೆದಿರುವ “Unofficial: Subramaniam Swamy” ಹೆಸರಿನ ಅಣಕ ಪುಟ , ಇನ್ನೊಂದು ಸ್ವತಹ ಸ್ವಾಮಿಯೇ ಅನುಮೋದಿಸಿರುವ ಹಾಗು ಶಂಖ್ ನಾದ್ ವೆಬ್ ಸೈಟ್ ನಿರ್ವಹಿಸುತ್ತಿರುವ “Unofficial: Dr. Subramanian Swamy” ಹೆಸರಿನ ಅಭಿಮಾನಿ ಪುಟ.
ಫೇಸ್ ಬುಕ್ ಸ್ವಾಮಿಯ ಅಣಕ ಪುಟವನ್ನು ಡಿಲೀಟ್ ಮಾಡಿದ ಬಳಿಕ ಆ ಪುಟಕ್ಕೆ ಮತ್ತೆ ಅವಕಾಶ ನೀಡಬೇಕೆಂದು ಆಗ್ರಹಿಸಿ Change.org ಮನವಿ ಅಭಿಯಾನ ಪ್ರಾರಂಭವಾಗಿದೆ.1,300 ಮಂದಿ ಈವರೆಗೆ ಸಹಿ ಮಾಡಿರುವ ಈ ಮನವಿಯಲ್ಲಿ " ಪ್ರಸ್ತುತ ಭಾರತೀಯ ರಾಜಕೀಯದ ಬಗ್ಗೆ ಈ ಪುಟ ಸಾಕಷ್ಟು ವಾಸ್ತವಗಳನ್ನು ಮುಂದಿಡುತ್ತಿತ್ತು. ನಿಜವಾದ ವ್ಯಕ್ತಿಯ ಬದಲು ಆತನ ಹೆಸರಿನ ಅಣಕ ಪುಟ ಇಷ್ಟೊಂದು ಗಮನ ಸೆಳೆದಿದ್ದು ಅತ್ಯಂತ ಅಪರೂಪ. ಫೇಸ್ ಬುಕ್ ಮುಖ್ಯ ಕಾರ್ಯಾಲಯ ಈ ಬಗ್ಗೆ ವಿವೇಕದಿಂದ ವರ್ತಿಸಿ ಆ ಪುಟವನ್ನು ಮತ್ತೆ ಜೀವಂತಗೊಳಿಸಲಿದೆ ಎಂದು ನಂಬಿದ್ದೇವೆ " ಎಂದು ಹೇಳಲಾಗಿದೆ.
ಡಿಸೆಂಬರ್ ೨೦೧೪ ರಲ್ಲಿ ತನ್ನ ಅಣಕ ಪುಟವನ್ನು ಡಿಲೀಟ್ ಮಾಡದಿದ್ದರೆ ಫೇಸ್ ಬುಕ್ ಕಾನೂನು ಕ್ರಮ ಎದುರಿಸಬೇಕಾಗುತ್ತೆ ಎಂದು ಸ್ವಾಮೀ ಹೇಳಿದ್ದರು. ಆಗ ಗೊಂದಲಕ್ಕೊಳಗಾದ ಫೇಸ್ ಬುಕ್ ಅಣಕ ಪುಟದ ಬದಲು ಸ್ವಾಮಿಯ ಅಭಿಮಾನಿ ಪುಟವನ್ನೇ ಡಿಲೀಟ್ ಮಾಡಿತ್ತು.
ಈ ಅಣಕ ಪುಟದಲ್ಲಿ ಸ್ವಾಮೀ, ಬಿಜೆಪಿ ಹಾಗು ಸಂಘ ಪರಿವಾರದ ಸಿದ್ಧಾಂತ ಹಾಗು ದ್ವಂದ್ವಗಳ ಬಗ್ಗೆ ಚಿತ್ರಗಳು, ಹೇಳಿಕೆಗಳು , ವ್ಯಂಗ್ಯ ಚಿತ್ರಗಳು ಇತ್ಯಾದಿ ಪ್ರಕಟವಾಗಿ ಭಾರೀ ಗಮನ ಸೆಳೆದಿತ್ತು. ಎಲ್ಲಿವರೆಗೆಂದರೆ ಸ್ವಾಮೀ ಅಭಿಮಾನಿಗಳು ಇದನ್ನೇ ಸ್ವಾಮಿಯ ಅಭಿಮಾನಿ ಪುಟ ಎಂದು ತಿಳಿದು ಗೊಂದಲ ಸೃಷ್ಟಿಯಾಗಿತ್ತು.
ಸ್ವಾಮಿಯ ಈ ಅಣಕ ಪುಟ ನಿರ್ವಹಿಸುತ್ತಿರುವ ಅನಾಮಿಕ ಒಮ್ಮೆ ದಿ ನ್ಯೂಸ್ ಮಿನಿಟ್ ವೆಬ್ ಸೈಟ್ ನೊಂದಿಗೆ ಮಾತನಾಡಿ " ನನ್ನನ್ನು ಸೌದಿ ಪ್ರಾಯೋಜಿತ ಭಯೋತ್ಪಾದಕ, ಇಟಾಲಿಯನ್ ಮಾಫಿಯ ಎಂದೆಲ್ಲ ಸ್ವಾಮೀ ಅಭಿಮಾನಿಗಳು ಆರೋಪಿಸುತ್ತಾರೆ. ಆದರೆ ನಾನು ಅವರಿಗೆ ಅವಹೇಳನ ಮಾಡಲು ಇದನ್ನು ನಿರ್ವಹಿಸುತ್ತಿಲ್ಲ. ನಾನು ಧರ್ಮವನ್ನು ಟಾರ್ಗೆಟ್ ಮಾಡಿಲ್ಲ, ಸಿದ್ಧಾಂತವನ್ನು ಟಾರ್ಗೆಟ್ ಮಾಡಿದ್ದೇನೆ. ಸ್ವಾಮೀ ಮತ್ತು ಅವರ ಜನ ಹಿಂದೂ ಧರ್ಮದೊಂದಿಗೆ ಪುರಾಣ ಬೆರೆಸಿ ಅದನ್ನು ವ್ಯಂಗ್ಯ ಮಾಡುತ್ತಿದ್ದಾರೆ. ನಾನು ಅವರ ಈ ವೇದಿಕ್ ಸಿದ್ಧಾಂತವನ್ನು ವ್ಯಂಗ್ಯ ಮಾಡುತ್ತಿದ್ದೇನೆ " ಎಂದು ಹೇಳಿದ್ದರು.








