ಬ್ರಸೆಲ್ಸ್ ಭಯೋತ್ಪಾದ ದಾಳಿ: ಇನ್ನೂ ಮೂವರ ಬಂಧನ

ಬ್ರಸೆಲ್ಸ್, ಮಾ. 28: ಕಳೆದ ಮಂಗಳವಾರ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ನ ವಿಮಾನ ನಿಲ್ದಾಣ ಮತ್ತು ಮೆಟ್ರೊ ರೈಲು ನಿಲ್ದಾಣದಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿ ಇನ್ನೂ ಮೂವರು ವ್ಯಕ್ತಿಗಳ ವಿರುದ್ಧ ದೋಷಾರೋಪ ಹೊರಿಸಲಾಗಿದೆ ಎಂದು ಬ್ರಸೆಲ್ಸ್ ಪ್ರಾಸಿಕ್ಯೂಟರ್‌ಗಳು ಸೋಮವಾರ ಹೇಳಿದ್ದಾರೆ.
ಮೂವರ ಹೆಸರುಗಳನ್ನು ಬಿಡುಗಡೆಗೊಳಿಸಿರುವ ಫೆಡರಲ್ ಪ್ರಾಸಿಕ್ಯೂಟರ್‌ಗಳು, ಈ ಹಂತದಲ್ಲಿ ಇದಕ್ಕಿಂತ ಹೆಚ್ಚಿನ ವಿವರಣೆಗಳನ್ನು ನೀಡಲು ಅಸಾಧ್ಯ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಇನ್ನೋರ್ವ ವ್ಯಕ್ತಿಯನ್ನು ವಿಚಾರಣೆ ನಡೆಸಿ ಬಿಡುಗಡೆಗೊಳಿಸಲಾಗಿದೆ ಎಂದರು.
ಬ್ರಸೆಲ್ಸ್ ಮತ್ತು ಆ್ಯಂಟ್‌ವರ್ಪ್ ಹಾಗೂ ಸುತ್ತಮುತ್ತ 13 ಹೊಸ ದಾಳಿಗಳನ್ನು ನಡೆಸಲಾಗಿದ್ದು, ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾಗಿ ಅವರು ರವಿವಾರ ತಿಳಿಸಿದ್ದರು.
ಮೃತರ ಸಂಖ್ಯೆ 35ಕ್ಕೇರಿಕೆ
ಬ್ರಸೆಲ್ಸ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೇರಿದೆ ಎಂದು ಬೆಲ್ಜಿಯಂನ ಆರೋಗ್ಯ ಸಚಿವೆ ಮ್ಯಾಗಿ ಡಿ ಬ್ಲಾಕ್ ಸೋಮವಾರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
‘‘ನಾಲ್ವರು ಗಾಯಾಳುಗಳು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ವೈದ್ಯಕೀಯ ತಂಡಗಳು ಸಾಧ್ಯವಿರುವ ಎಲ್ಲವನ್ನೂ ಮಾಡಿದವು. ದಾಳಿಯಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 35. ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಗಳಿಗೆ ದೇವರು ನೀಡಲಿ’’ ಎಂಬುದಾಗಿ ಸಚಿವೆ ಟ್ವೀಟ್ ಮಾಡಿದ್ದಾರೆ.







