ಗಿರಿಜನರಿಗೆ ಮೂಲಭೂತ ಸೌಲಭ್ಯ ಕಲಿ್ಪಸಿ: ಸಂಸದ ಪ್ರತಾಪ್
ಕೊಡಗು ಜಿಲ್ಲಾ ಜಾಗೃತಿ, ಉಸ್ತುವಾರಿ ಸಮಿತಿ ಸಭೆ

ಮಡಿಕೇರಿ, ಮಾ.28: ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಗಿರಿಜನರು ಮೂಲಭೂತ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಸಂಸದ ಪ್ರತಾಪ್‌ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಗ್ರ ಗಿರಿಜನ ಯೋಜನೆಯ ಕುರಿತು ಪ್ರಗತಿ ಪರಿಶೀಲಿಸಿದರು. ಗಿರಿಜನ ಸಮೂಹದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಪ್ರತಾಪ್‌ಸಿಂಹ, ಕಾಟಾಚಾರಕ್ಕೆ ಸಭೆಯಲ್ಲಿ ಪಾಲ್ಗೊಳ್ಳದಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ಮಾತನಾಡಿದ ಐಟಿಡಿಪಿ ಅಧಿಕಾರಿ, ತಿತಿಮತಿಯಲ್ಲಿ 53 ಹೆಕ್ಟೇರ್ ಪ್ರದೇಶವನ್ನು ಗುರುತಿಸಲಾಗಿದ್ದು, ಇದರ ಡಿನೋಟಿಫಿಕೇಶನ್ ಬಳಿಕ ಪುನರ್ವಸತಿಗೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.
ವೆಸ್ಟ್ ನೆಮ್ಮಲೆಯಲ್ಲಿ 303 ಎಕರೆ ಜಾಗ ಲಭ್ಯವಿದೆಯಾದರೂ ಅದನ್ನು ಗಿರಿಜನರ ಪುನರ್ವಸತಿಗೆ ಬಳಸಲು ಕೇಂದ್ರ ಸರಕಾರದ ಅನುಮತಿ ಅಗತ್ಯವಿದೆ ಎಂದರು. ಸಂಸದರು ಮಾತನಾಡಿ, ಕಳೆದ ಇಪ್ಪತ್ತು ತಿಂಗಳಿನಿಂದ ಗಿರಿಜನರ ಕಲ್ಯಾಣ ಕಾರ್ಯಕ್ರಮದಡಿ ಮನೆ ನಿರ್ಮಿಸಿಕೊಡುವುದಕ್ಕೆ ಸಂಬಂಧಿಸಿದಂತೆ ಸಬೂಬುಗಳನ್ನಷ್ಟೆ ಹೇಳುತ್ತಾ ಬರಲಾಗುತ್ತಿದ್ದು, ಯಾವುದೇ ಪ್ರಗತಿಯನ್ನು ಕಾಣಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗಿರಿಜನರಿಗಾಗಿ ನಿರ್ಮಿಸಿರುವ ಮನೆಗಳ ಮೇಲೆ ವಿವರಗಳನ್ನು ಒಳಗೊಂಡ ಫಲಕವನ್ನು ಇಂಗ್ಲಿಷ್‌ನಲ್ಲಿ ಅಳವಡಿಸುವಂತೆ ಸೂಚಿಸಲಾಗಿತ್ತಾದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಕೆಲವು ಸ್ವಯಂ ಸೇವಾ ಸಂಸ್ಥೆಗಳು ಅದೇ ಮನೆಗಳ ಫೋಟೊ ತೆಗೆದು ವಿದೇಶಿ ನೆರವು ಪಡೆದು ದುಡ್ಡು ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್‌ಸಿಂಹ ಆರೋಪಿಸಿದರು. ಕಳೆದ ಇಪ್ಪತ್ತು ತಿಂಗಳಿನಿಂದ ನಿಗದಿತ ಶೌಚಾಲಯಗಳನ್ನು ನಿರ್ಮಿಸಲು ಐಟಿಡಿಪಿಗೆ ಸಾಧ್ಯವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸಹಾಯಧನ ಬಿಟ್ಟುಕೊಟ್ಟ 3,497 ಗ್ರಾಹಕರು:
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ 3,497 ಅನಿಲ ಗ್ರಾಹಕರು ತಮ್ಮ ಸಹಾಯ ಧನವನ್ನು ಬಿಟ್ಟು ಕೊಟ್ಟಿರುವುದಾಗಿ ಆಹಾರ ಇಲಾಖಾ ಉಪನಿರ್ದೇಶಕ ನಾಯಕ್, ಸಂಸದರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಸಭೆಗೆ ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆಯ ಆಸ್ತಿ 538 ಎಕರೆ : ತೋಟಗಾರಿಕಾ ಇಲಾಖೆಯ ಸುಪರ್ದಿಯಲ್ಲಿರುವ ಜಿಲ್ಲೆಯ 538 ಎಕರೆ ಜಾಗದಿಂದ ವಾರ್ಷಿಕವಾಗಿ ದೊರಕುತ್ತಿರುವ ಆದಾಯ ಕೇವಲ 30 ಲಕ್ಷ ರೂ. ಎನ್ನುವ ಮಾಹಿತಿ ಸಭೆಯ ಗಮನ ಸೆಳೆಯಿತು.
ಸಂಸದರ ಪ್ರಶ್ನೆ ಯೊಂದಕ್ಕೆ ಉತ್ತರಿಸಿದ ತೋಟಗಾರಿಕಾ ಅಧಿಕಾರಿ, ಇಲಾಖಾ ಅಧೀನದ ಜಾಗದ ನಿರ್ವಹಣೆಗೆ ಅಗತ್ಯ ಸಿಬ್ಬಂದಿಯಿಲ್ಲ. ಇರುವ ಸಿಬ್ಬಂದಿಯರ ಸಹಕಾರದೊಂದಿಗೆ ವಾರ್ಷಿಕ 5 ಲಕ್ಷ ಸಸಿಗಳನ್ನು ಬೆಳೆದು ಮಾರಾಟ ಮಾಡುವುದರಿಂದ 25 ಲಕ್ಷ ರೂ. ಆದಾಯ ಬರುತ್ತಿರುವುದಾಗಿ ತಿಳಿಸಿದರು. ಅಧಿಕಾರಿ ಸಿಬ್ಬಂದಿಯ ಕೊರತೆಯ ಸಮಸ್ಯೆಯನ್ನು ಮುಂದಿಟ್ಟಾಗ ಜಿಲ್ಲಾಧಿಕಾರಿಗಳು, ನರೇಗಾ ಮೂಲಕ ಅಗತ್ಯ ಕೆಲಸ ಕಾರ್ಯಗಳನ್ನು ನಡೆಸುವಂತೆ ಸಲಹೆ ನೀಡಿದರು.
ಕೊಡಗಿನಲ್ಲಿದ್ದಾರೆ 1,447 ಕರಿಮೆಣಸು ಬೆಳೆಗಾರರು: ಜಿ
ಲ್ಲೆಯಲ್ಲಿ ಕರಿಮೆಣಸು ಬೆಳೆೆಯುವ ಬಗ್ಗೆ ಕೇಳಿದ ಪ್ರಶ್ನೆಗೆ ತೋಟಗಾರಿಕಾ ಇಲಾಖಾ ಅಧಿಕಾರಿ, ಕೊಡಗಿನ 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕರಿಮೆಣಸನ್ನು ಬೆಳೆಯಲಾಗುತ್ತಿದ್ದು, 1,447 ಮಂದಿ ಕರಿಮೆಣಸು ಬೆಳೆಗಾರರಿದ್ದಾರೆಂದು ತಿಳಿಸಿದರು. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಸಂಸದರು, ಅತೀ ಹೆಚ್ಚು ಕರಿಮೆಣಸು ಬೆಳೆಯುತ್ತಿರುವ ಜಿಲ್ಲೆ ಕೊಡಗು. ನೆರೆಯ ಕೇರಳದಲ್ಲಿ ಕೊಡಗಿನ ಕರಿಮೆಣಸನ್ನು ಖರೀದಿಸಿ ರಪ್ತು ಮಾಡುತ್ತಿರುವುದಲ್ಲದೆ, ಕಳೆದ ಬಾರಿ ಕರಿಮೆಣಸಿಗೆ ನೀಡಲಾಗಿದ್ದ ಇಡುಕ್ಕಿ ಪ್ಯಾಕೇಜ್‌ನ ಸಂಪೂರ್ಣ ಪ್ರಯೋಜನವನ್ನು ಆ ರಾಜ್ಯದವರು ಪಡೆದಿದ್ದಾರೆ. ಜಿಲ್ಲೆಯ ಪ್ರತಿ ಕಾಫಿ ತೋಟಗಳಲ್ಲೂ ಕರಿಮೆಣಸು ಬೆಳೆಯುವುದರಿಂದ ಆ ಜಾಗಗಳ ಆರ್‌ಟಿಸಿಯಲ್ಲಿ ಕಾಫಿಯೊಂದಿಗೆ, ಕರಿಮೆಣಸು ಬೆಳೆಯನ್ನು ನಮೂದಿಸುವಂತಾಗಬೇಕೆಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿಗಳು ಮಾತನಾಡಿ, ಆರ್‌ಟಿಸಿಯ ಸಾಫ್ಟ್‌ವೇರ್‌ನಲ್ಲಿ ವರ್ಷಂಪ್ರತಿ ಬೆಳೆ ವಿವರ ದಾಖಲಿಸುವಂತಹ ವ್ಯವಸ್ಥೆ ಇರುವುದರಿಂದ, ಸಾಕಷ್ಟು ಆರ್‌ಟಿಸಿಗಳಲ್ಲಿ ನೋ ಕ್ರಾಪ್ ಎಂದು ನಮೂದಾಗುತ್ತಿದೆ. ಇಲ್ಲಿನ ಕಾಫಿ ಮತ್ತು ಕರಿಮೆಣಸು ಬಹುವಾರ್ಷಿಕ ಬೆಳೆಗಳಾದ್ದರಿಂದ ಇವುಗಳನ್ನು ಕನಿಷ್ಟ 5 ವರ್ಷಗಳಿಗೆ ಅನ್ವಯವಾಗುವಂತೆ ಬದಲಾಯಿಸುವ ವ್ಯವಸ್ಥೆಯಾಗಬೇಕಿದೆಯೆಂದು ಇರುವ ತಾಂತ್ರಿಕ ಸಮಸ್ಯೆಯನ್ನು ತೆರೆದಿಟ್ಟರು.
ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಒತ್ತಾಯ: ಜೀವನದಿ ಕಾವೇರಿಯ ಉಗಮ ಸ್ಥಾನವಾಗಿರುವ ತಲಕಾವೇರಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ. ಆದ್ದರಿಂದ ಕ್ಷೇತ್ರದಿಂದ ಅರ್ಧ ಕಿ.ಮೀ. ಕೆಳಭಾಗದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಬೇಕೆಂದು ಜಿಲ್ಲಾ ಜಾಗೃತ ಸಮಿತಿ ಸದಸ್ಯ ಮನ ಮುತ್ತಪ್ಪ ಸಂಸದರನ್ನು ಆಗ್ರಹಿಸಿದರು.
ತಲಕಾವೇರಿ ಕ್ಷೇತ್ರದಲ್ಲಿ ಬಸ್ ಮತ್ತಿತರ ವಾಹನಗಳು ನಿಲುಗಡೆಯಾಗುವ ಕೆಳ ಪ್ರದೇಶದಲ್ಲಿ ಶೌಚಾಲಯ ಇಲ್ಲದಿರುವುದರಿಂದ, ಬರುವ ಪ್ರವಾಸಿಗರಿಂದ ಅಲ್ಲಿನ ಪರಿಸರ ಹಾಳಾಗುತ್ತಿದೆ. ಇದೇ ರೀತಿ ಭಾಗಮಂಡಲ ಪರಿಸರದಲ್ಲೂ ಅಶುಚಿತ್ವ ತಾಂಡವವಾಡುತ್ತಿದೆಯೆಂದು ತಿಳಿಸಿದರು.







