ಸಿಬಿಐ ತನಿಖೆ ಅಗತ್ಯವಿಲ್ಲ: ಮಹದೇವಪ್ರಸಾದ್
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅವ್ಯವಹಾರ
ಬೆಂಗಳೂರು, ಮಾ.28: ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಗರ ಶಾಖೆಯಲ್ಲಿ ನಡೆದಿರುವ ಸುಮಾರು 62.70 ಕೋಟಿ ರೂ.ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ ಮಂಡಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಈಗಾಗಲೇ ಪೊಲೀಸರು, ಸಿಓಡಿಯಿಂದ ತನಿಖೆ ನಡೆಯುತ್ತಿದ್ದು, ಇಲಾಖಾ ಪರಿವೀಕ್ಷಣೆಯು ನಡೆದಿದೆ. ಪ್ರಕರಣದ ಕುರಿತು ಆರೋಪಪಟ್ಟಿಯೂ ಸಲ್ಲಿಕೆಯಾಗಿರುವುದರಿಂದ, ಮತ್ತೊಂದು ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವುದು ಅಗತ್ಯವಿಲ್ಲ ಎಂದರು.
ಈಗಾಗಲೇ ಸರಕಾರವು 3.16 ಕೋಟಿ ರೂ.ವಸೂಲು ಮಾಡಿದ್ದು, 2.80 ಕೋಟಿ ರೂ.ಮೊತ್ತದ ಚಿನ್ನವನ್ನು ವಶಕ್ಕೆ ಪಡೆದಿದೆ. 40 ಕೋಟಿ ರೂ. ವೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಅದನ್ನು ಹರಾಜು ಹಾಕಿ ಸಹಕಾರಿ ಬ್ಯಾಂಕ್‌ಗೆ ಜಮೆ ಮಾಡುವ ಕೆಲಸವನ್ನು ಮಾಡುತ್ತೇವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಈ ಪ್ರಕರಣವು ಸಹಕಾರಿ ಇಲಾಖೆಯೆ ತಲೆತಗ್ಗಿಸುವಂತೆ ಮಾಡಿದೆ. ಆದುದರಿಂದ, ಇದರಲ್ಲಿ ಯಾರೇ ಎಷ್ಟೇ ಪ್ರಭಾವಿಗಳಿದ್ದರೂ ಅವರ ವಿರುದ್ಧ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಿ. ಇಂತಹ ಕೆಲಸಗಳನ್ನು ಮಾಡುವವರು ಅಧಿಕಾರದಲ್ಲಿ ಯಾರಿರುತ್ತಾರೋ ಅವರ ನೆಂಟರು ಆಗುತ್ತಾರೆ. ನಿಮಗೂ ದೂರವಾಣಿ ಕರೆಗಳು ಬರಬಹುದು. ಆದರೆ, ಯಾವುದಕ್ಕೂ ರಾಜಿಯಾಗದೆ ಕ್ರಮ ಕೈಗೊಳ್ಳಿ ಎಂದು ತೀಕ್ಷ್ಣವಾಗಿ ನುಡಿದರು.







