ಸೊರಬ: 2016-17ನೆ ಸಾಲಿನ ಪಪಂ ಬಜೆಟ್ ಮಂಡನೆ
ಸೊರಬ,ಮಾ.28: ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಪಪಂ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ ಅಧ್ಯಕ್ಷತೆಯಲ್ಲಿ 2016-17ನೆ ಸಾಲಿನ ಪಟ್ಟಣ ಪಂಚಾಯತ್ ಬಜೆಟ್‌ನ್ನು ಮಂಡಿಸಲಾಯಿತು. ಸಭೆ ಆರಂಭವಾಗುತ್ತಿದ್ದಂತೆ ಕೆಲ ಸದಸ್ಯರು 2014-15 ಹಾಗೂ 2015-16ನೆ ಸಾಲಿನ ಪಪಂ ವತಿಯಿಂದ ಸಂಗ್ರಹವಾದ ಕಂದಾಯ ವಸೂಲಾತಿ, ಸರಕಾರದಿಂದ ಬಂದಿರುವ ಅನುದಾನಗಳ ಜಮಾ ಖರ್ಚು ಹಾಗೂ ಉಳಿದ ಹಣದ ಸಮರ್ಪಕವಾದ ಲೆಕ್ಕದ ಮಾಹಿತಿ ನೀಡುವಂತೆ ಒತ್ತಾಯಿಸಿದರು. ಪಪಂ ಸದಸ್ಯ ಸುಜಾಯತ್ ಉಲ್ಲಾ ಮಾತನಾಡಿ, ಪಪಂ ವ್ಯಾಪ್ತಿಯಲ್ಲಿ ಹಳೆಯ ಚಪ್ಪಡಿ ಚರಂಡಿಗಳನ್ನು ತೆರವುಗೊಳಿಸಿ ಹೊಸ ಬಾಕ್ಸ್ ಚರಂಡಿಯನ್ನು ನಿರ್ಮಿಸಲಾಗಿದೆ. ಆದರೆ, ಹಳೆಯ ಚಪ್ಪಡಿ ಕಲ್ಲುಗಳು ಹರಾಜು ಹಾಕಿರುವ ಬಗ್ಗೆಯಾಗಲಿ, ಅಥವಾ ಹರಾಜಿನಲ್ಲಿ ಬಂದ ಆದಾಯದ ಬಗ್ಗೆ ಈ ವರೆಗೂ ಲೆಕ್ಕದಲ್ಲಿ ತೊರಿಸದಿರುವುದು ಅನುಮಾನಕ್ಕೆ ಎಡೆಮಾಡುತ್ತದೆ. ಆದ್ದರಿಂದ ಹಳೆ ಜಮಾ ಖರ್ಚಿನ ಬಗ್ಗೆ ಮಾಹಿತಿ ನೀಡಿ ನಂತರ ಸಭೆ ನಡೆಸುವಂತೆ ತಿಳಿಸಿದರು. ಈ ಬಾರಿಯ ಬಜೆಟ್‌ನಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕುಡಿಯುವ ನೀರಿಗೆ ರಿಯಾಯಿತಿ ದರದಲ್ಲಿ ನೀರಿನ ನಲ್ಲಿ ಅಳವಡಿಸುವುದು ಹಾಗೂ ಶಾಲಾ ಮುಂಭಾಗದಲ್ಲಿ ವಾಹನಗಳು ನಿಧಾನವಾಗಿ ಚಲಿಸುವಂತೆ ಸೂಚನಾ ಫಲಕಗಳ ಅಳವಡಿಕೆ, ಪಪಂ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಕಲ್ಯಾಣ ಮಂಟಪ ನಿರ್ಮಿಸುವಂತೆ ಸಭೆಯಲ್ಲಿದ್ದ ಪಪಂ. ಸದಸ್ಯರಾದ ಎಂ.ಡಿ. ಉಮೇಶ್, ಮಂಚಿ ಹನುಮಂತಪ್ಪ, ಬಂದಗಿ ಬಸವರಾಜ್ ಶೇಟ್ ಸೇರಿದಂತೆ ಕೆಲ ಸದಸ್ಯರು ಸಭೆೆಯ ಗಮನಕ್ಕೆ ತಂದರು. ಕಳೆದರಡು ಸಾಲಿನ ಬಜೆಟ್‌ನ ಆಯವ್ಯಯದ ಬಗ್ಗೆ ಸಭೆ ಕರೆದು ಚರ್ಚಿಸದೆ ಏಕಾಏಕಿ 2016-17ನೆ ಸಾಲಿನ ಬಜೆಟ್ ಮಂಡನೆ ರೀತಿ ಸೂಕ್ತವಾಗಿಲ್ಲ. ಆದ್ದರಿಂದ ಮುಂದಿನ ಸಾಲಿನ ಆಯವ್ಯಯದ ಅಂದಾಜನ್ನು ಮಂಡಿಸಿದ ತರುವಾಯ ಮುಂದಿನ ದಿನಗಳಲ್ಲಿ ಸಾಮಾನ್ಯ ಸಭೆಕರೆದು 2014-15 ಹಾಗೂ 2015-16ನೆ ಸಾಲಿನ ಆಯವ್ಯಯ ಅಂದಾಜು ಹಾಗೂ ವಾಸ್ತವ ಲೆಕ್ಕವನ್ನು ಮಂಡಿಸಬೇಕು ಎಂಬ ಸಲಹೆಗಳು ಕೇಳಿಬಂದವು. ಸಭೆಯಲ್ಲಿ ಪಪಂ ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಮಂಚಿ ಹನುಮಂತಪ್ಪ, ಸುಜಾಯತ್‌ವುಲ್ಲಾ, ಎಂ.ಡಿ. ಉಮೇಶ್, ಮಹೇಶ್‌ಗೌಳಿ, ಮೆಹಬೂಬಿ, ಬೀಬಿಝುಲೇಖಾ, ರತ್ನಮ್ಮ, ರೇಖಾ ಚಂದ್ರಶೇಖರ್, ಬಂದಗಿ ಬಸವರಾಜ್ ಶೇಟ್, ಷಣ್ಮುಖ, ಮುಖ್ಯಾಧಿಕಾರಿ ಎಂ.ಕೆ.ಸುರೇಶ್, ಪ್ರ.ದ.ಸ ಪರಶುರಾಮ್ ಉಪಸ್ಥಿತರಿದ್ದರು





