ರಾಜ್ಯಪಾಲರ ಸಲಹೆಯಂತೆ ವರದಿ ಕುರಿತು ತೀರ್ಮಾನ: ಡಿ.ಎಚ್.ಶಂಕರಮೂರ್ತಿ
ವಕ್ಫ್ ಆಸ್ತಿ ದುರ್ಬಳಕೆ ಆರೋಪ
ಬೆಂಗಳೂರು, ಮಾ.28: ವಕ್ಫ್ ಆಸ್ತಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ನಲ್ಲಿ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಮಂಡಿಸುವ ವಿಚಾರದಲ್ಲಿ ಕಾನೂನಿನ ಬಿಕ್ಕಟ್ಟಿದ್ದು, ರಾಜ್ಯಪಾಲರ ಸಲಹೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದ್ದಾರೆ.
ಮಧ್ಯಾಹ್ನ ಕಲಾಪ ಪ್ರಾರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಸದನದ ಬಾವಿಗಿಳಿದ ವಿರೋಧ ಪಕ್ಷದ ಸದಸ್ಯರು, ಅನ್ವರ್ ಮಾಣಿಪ್ಪಾಡಿ ವರದಿ ಯನ್ನು ಮಂಡಿಸುವಂತೆ ಸ್ಪೀಕರ್ ರೂಲಿಂಗ್ ನೀಡಿದ್ದರೂ ಆಡಳಿತ ಪಕ್ಷ ವರದಿಯನ್ನು ಮಂಡಿ ಸುತ್ತಿಲ್ಲ ಆಕ್ರೋಶ ವ್ಯಕ್ತಪಡಿಸಿ, ಸದನವನ್ನು ಬಹಿಷ್ಕರಿಸಿದರು.
ಈ ವೇಳೆ ಮಾತನಾಡಿದ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆಗೆ ಕಾನೂನು ತೊಡಕ್ಕಿದ್ದು, ನನ್ನೊಬ್ಬನಿಂದಲೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜ್ಯಪಾಲರ ಸಲಹೆಯಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿ ಸದನವನ್ನು ಮುಂದೂಡಿದರು.
ಸದನ ಮುಗಿದ ನಂತರ ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಈಗಾಗಲೆ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಕಲಂ 10(2) ಪ್ರಕಾರ ಮಂಡಿಸಲಾಗಿದೆ. ಅದನ್ನು ಮತ್ತೊಮ್ಮೆ ವಿಸ್ತೃತವಾಗಿ ಚರ್ಚಿಸಲು ಬರುವುದಿಲ್ಲ. ವಿರೋಧ ಪಕ್ಷದವರು ಬೇಡದ ವಿಷಯಗಳನ್ನು ಮುಂದಿಟ್ಟು ಕಾಲಹರಣ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಸಭಾಪತಿಗಳು ಅನ್ವರ್ ಮಾಣಿಪ್ಪಾಡಿ ವರದಿ ಕುರಿತು ರಾಜ್ಯಪಾಲರ ಬಳಿ ಚರ್ಚಿಸುವ ಅಗತ್ಯವಿಲ್ಲ. ಅದೇನಿದ್ದರು ಇಲ್ಲಿಯೇ ತೀರ್ಮಾನ ಕೈಗೊಳ್ಳಬೇಕು. ರಾಜ್ಯದಲ್ಲಿ ನೀರಿನ ಕೊರತೆಯಿಂದ ಹಲವು ಸಮಸ್ಯೆಗಳು ಉದ್ಭವಿಸಿದೆ. ಈ ಕುರಿತು ಗಂಭೀರವಾಗಿ ಚರ್ಚಿಸಬೇಕಾಗಿದೆ. ಆದರೆ, ವಿರೋಧ ಪಕ್ಷದವರು ಬೇಡದ ವಿಷಯಗಳನ್ನು ಮುಂದಿಟ್ಟು ಈ ರೀತಿಯಲ್ಲಿ ಸಭಾತ್ಯಾಗ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪಮಾತನಾಡಿ, ಅನ್ವರ್ ಮಾಣಿಪ್ಪಾಡಿಯ ವರದಿ ಯನ್ನು ಸಂಪೂರ್ಣವಾಗಿ ಮಂಡಿಸಿದರೆ ಕಾಂಗ್ರೆಸ್‌ನ ಹಲವು ನಾಯಕರ ಭ್ರಷ್ಟಾಚಾರ ಹೊರಕ್ಕೆ ಬರಲಿದೆ. ಹೀಗಾಗಿ ವರದಿಯನ್ನು ಮಂಡಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.





