‘ಇನ್ನೂ 10 ಸಾವಿರ ಕೋಟಿ ರೂ. ಸಾಲ ಮಾಡಿ’
ಬೆಂಗಳೂರು, ಮಾ. 28: ಈಗಾಗಲೇ 2ಲಕ್ಷ ಕೋಟಿ ರೂ.ಸಾಲ ಮಾಡಿದ್ದರೂ, ಇನ್ನೂ 10ಸಾವಿರ ಕೋಟಿ ರೂ.ಸಾಲ ಮಾಡಲು ರಾಜ್ಯ ಸರಕಾರಕ್ಕೆ ಅವಕಾಶವಿದೆ. ನೀರಾವರಿ ಯೋಜನೆಗಳನ್ನು ಕೈಗೊಳ್ಳಲು ರಾಜ್ಯ ಸರಕಾರ ಸಾಲ ಮಾಡಬೇಕೆಂದು ಆಡಳಿತ ಪಕ್ಷದ ಹಿರಿಯ ಸದಸ್ಯ ಬಸವರಾಜ ರಾಯರೆಡ್ಡಿ ಸಲಹೆ ನೀಡಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯದ ಅಂದಾಜುಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಜಿಎಸ್‌ಡಿಪಿ ಶೇ.17ರಷ್ಟಿದೆ. ಹೀಗಾಗಿ ಇನ್ನೂ 10 ಸಾವಿರ ಕೋಟಿ ರೂ. ಸಾಲ ಮಾಡುವ ಅವಕಾಶ ಸರಕಾರಕ್ಕಿದೆ ಎಂದು ಪ್ರತಿಪಾದಿಸಿದರು.
2015-16ನೆ ಸಾಲಿನಲ್ಲಿ ರಾಜ್ಯ ಸರಕಾರಕ್ಕೆ ನಿರೀಕ್ಷೆಗಿಂತ ಸುಮಾರು 800 ಕೋಟಿ ರೂ.ಕಡಿಮೆ ತೆರಿಗೆ ಸಂಗ್ರಹ ಆಗಬಹುದು. ಇದು ಈ ಸಾಲಿನಲ್ಲಿ ಉಂಟಾದ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಉಂಟಾದ ಬೆಲೆ ಏರಿಳಿತದಿಂದ ಆಗಿದೆ. ಉಳಿದಂತೆ ರಾಜ್ಯದ ನಿರೀಕ್ಷೆಯಂತೆ ತೆರಿಗೆ ಸಂಗ್ರಹವಾಗಿದೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸಿದರು.
ಕೆಲ ಯೋಜನೆಗಳಿಗೆ ನಿಗದಿ ಪಡಿಸಲಾದ ಹಣ ಖರ್ಚಾಗಿಲ್ಲ. ಹೀಗಾಗಿ ಈ ಬಗ್ಗೆ ಉನ್ನತ ಮಟ್ಟದ ಸಮಿತಿ ರಚಿಸಿ, ಘೋಷಿತ ಹಣವನ್ನು ವೆಚ್ಚ ಮಾಡದಿರುವ ಬಗ್ಗೆ ಕಾರಣ ತಿಳಿದುಕೊಳ್ಳಬೇಕು ಎಂದ ಅವರು, ಮುಂದಿನ ದಿನಗಳಲ್ಲಿ ನೀರಾವರಿ ಹಾಗೂ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೋರಿದರು.
ಪರಿಣಾಮಕಾರಿ ಬಜೆಟ್: ಆರ್ಥಿಕ ಶಿಸ್ತಿನಿಂದ ಕೂಡಿದ ಸಮತೋಲಿತ ಬಜೆಟ್ ಇದು. ಕೃಷಿ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ ಹಾಗೂ ನೀರಾವರಿಗೆ ಆದ್ಯತೆ ನೀಡಿ, ಜನ ಕಲ್ಯಾಣಕ್ಕೆ ಆಸ್ಥೆ ವಹಿಸಿರುವ ರಾಷ್ಟ್ರದಲ್ಲೇ ಪರಿಣಾಮಕಾರಿ ಬಜೆಟ್ ಆಗಿದೆ ಎಂದು ಶ್ಲಾಘಿಸಿದರು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಕನಿಷ್ಠ ಮೂರು ಕೋಟಿ ರೂಪಾಯಿಗಳಿಗೆ ಹೆಚ್ಚಿಸಬೇಕು. ಕುಡಿಯುವ ನೀರಿಗಾಗಿ ಮುಂದಿನ ಐದು ವರ್ಷದಲ್ಲಿ 50 ಸಾವಿರ ಕೋಟಿ ರೂ.ಮೊತ್ತದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.





