ಪ.ಜಾತಿ, ಪ.ವರ್ಗದ ನೌಕರರಿಗೆ ಮುಂಭಡ್ತಿ ನೀಡುವಂತೆ ಆಗ್ರಹ
ಡಿಎಸ್ಸೆಸ್ ಕಾರ್ಯಕರ್ತರಿಂದ ಅನಿರ್ದಿಷ್ಟಾವಧಿ ಧರಣಿ

ಚಿಕ್ಕಮಗಳೂರು, ಮಾ.28: ಪ.ಜಾತಿ, ಪ.ವರ್ಗದ ನೌಕರರಿಗೆ ಮುಂಭಡ್ತಿ ನೀಡದೆ ಸತಾಯಿಸುತ್ತಿರುವ ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ರದ್ದುಗೊಳಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದ ಡಿಸಿಸಿ ಬ್ಯಾಂಕ್ ಎದುರು ಸೋಮವಾರ ಅರ್ನಿದಿಷ್ಟಾವಧಿ ಧರಣಿಯನ್ನು ಆರಂಭಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಅವರ ನೇತೃತ್ವದಲ್ಲಿ ಬ್ಯಾಂಕಿನ ಆವರಣದಲ್ಲಿ ಧರಣಿ ಆರಂಭಿಸಿದ ಕಾರ್ಯಕರ್ತರು ಪ.ಜಾತಿ, ಪ.ವರ್ಗದ ನೌಕರರಿಗೆ ಮುಂಭಡಿ
್ತ ನೀಡುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ತರೀಕೆರೆ ಎನ್.ವೆಂಕಟೇಶ್ ಮಾತನಾಡಿ, ಸಂವಿಧಾನದ ಕಲಂ 16(4)ರ ಪ್ರಕಾರ ಹಾಗೂ ಸಹಕಾರ ಕಾಯ್ದೆ ಕಲಂ 30(ಬಿ) ಪ್ರಕಾರ ಸಂವಿಧಾನಾತ್ಮಕವಾಗಿ ಪ.ಜಾತಿ/ಪ.ವರ್ಗದ ನೌಕರರಿಗೆ ಮುಂಭಡ್ತಿ ನೀಡುವಂತೆ ಸರಕಾರದ ಆದೇಶವಿದ್ದರೂ ಅದನ್ನು ಕಡೆಗಣಿಸಿ ಡಿಸಿಸಿ ಬ್ಯಾಂಕ್‌ನಲ್ಲಿ ದಲಿತ ನೌಕರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಮುಂಭಡ್ತಿ ನೀಡದೆ ಇರುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿರುವ ದಲಿತ ನೌಕರರಿಗೆ ಅನಗತ್ಯವಾಗಿ ಕಿರುಕುಳ ನೀಡಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ದೂರಿದ ಅವರು, ಬೀರೂರು ಶಾಖೆಯ ಪ್ರಭಾರಿ ವ್ಯವಸ್ಥಾಪಕ ಬಿ.ಎಚ್.ಬಸವರಾಜಪ್ಪ ಅವರ ವರ್ಗಾವಣೆಯನ್ನು ರದ್ದುಪಡಿಸಿ ಅದೇ ಶಾಖೆಗೆ ಅವರನ್ನು ವ್ಯವಸ್ಥಾಪಕರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು. ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ರದ್ದುಪಡಿಸಿ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿದ ಅವರು, ಬೇಡಿಕೆಗೆ ಸ್ಪಂದಿಸು ವವರೆಗೂ ಧರಣಿ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕಿ ಶಶಿಕಲಾ, ಜಿಲ್ಲಾ ಸಂಘಟನಾ ಸಂಚಾಲಕ ಮರ್ಲೆ ಅಣ್ಣಯ್ಯ, ವಿ.ಧರ್ಮೇಶ್ ತಾಲೂಕು ಸಂಚಾಲಕ ಚಂದ್ರಪ್ಪ ಸಂಘಟನಾ ಸಂಚಾಲಕ ಯು.ಸಿ.ರಮೇಶ್, ಬಿ.ಟಿ.ಚಂದ್ರಶೇಖರ್ ಪಾಲ್ಗೊಂಡಿದ್ದರು







