ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಿ: ಡಾ.ಚನ್ನಪ್ಪಗೌಡ
ಬೆಂಗಳೂರು, ಮಾ. 28: ಯಾವುದೇ ಒತ್ತಡ ಹಾಗೂ ಒತ್ತಾಯಗಳಿಗೆ ಮಣಿಯದೆ ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದು ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಎಸ್.ಚನ್ನಪ್ಪ ಗೌಡ ಇಂದಿಲ್ಲಿ ಸಲಹೆ ಮಾಡಿದ್ದಾರೆ.
ಸೋಮವಾರ ನಗರದ ವಾರ್ತಾ ಸೌಧದಲ್ಲಿ ಆಯೋಜಿಸಿದ್ದ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಕಾರಿ ಸೇವೆಗೆ ಸೇರಿದ ಮೇಲೆ ವರ್ಗಾವಣೆಗೆ ಅಂಜಬಾರದು ಎಂದು ಸೂಚಿಸಿದರು.
ಸರಕಾರ ರೂಪಿಸಿರುವ ಹಾಗೂ ರೂಪಿಸುವ ಯೋಜನೆಗಳಿಗೆ ವಿವಿಧ ಮಾಧ್ಯಮಗಳ ಪ್ರಚಾರ ದೊರಕಿಸಿಕೊಡುವ ಮಹತ್ತರ ಕಾರ್ಯವನ್ನು ನಿರ್ವಹಿಸುತ್ತಿರುವ ವಾರ್ತಾ ಇಲಾಖೆಯು ಸರಕಾರದ ವರ್ಚಸ್ಸು ವೃದ್ಧಿಸುವಲ್ಲಿ ಉತ್ತಮ ಪಾತ್ರ ನಿರ್ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ 2016-17ನೆ ಸಾಲಿನಲ್ಲಿ ಆಯವ್ಯಯದಲ್ಲಿ ಗಣನೀಯ ಏರಿಕೆ ಉಂಟಾಗಿದೆ ಎಂದರು.
ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ಜಂಟಿ ನಿರ್ದೇಶಕರಾದ ಎಂ.ರವಿಕುಮಾರ್ ಮತ್ತು ಎನ್.ಭೃಂಗೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.





