ಜ್ಞಾನವೇ ಭವಿಷ್ಯ; ಅದನ್ನು ಸಂಪತ್ತಾಗಿ ಪರಿವರ್ತಿಸಿಕೊಳ್ಳಿ: ಸಚಿವ ನಿತಿನ್ ಗಡ್ಕರಿ

ಮಣಿಪಾಲ, ಮಾ.28: ಜ್ಞಾನವೇ ಭವಿಷ್ಯ. ಅದನ್ನು ಸಂಪತ್ತಾಗಿ ಪರಿವರ್ತಿ ಸಲು ವಿದ್ಯಾರ್ಥಿಗಳು ಮುಂದಾಗಬೇಕು. ಸಂಶೋಧನೆ, ಹೊಸ ಅನ್ವೇಷಣೆಗಳಿಗೆ ಮುಂದಾಗಬೇಕು ಎಂದು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ನೌಕಾಯಾನ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಇದೇ ಮೊದಲ ಬಾರಿ ಉಡುಪಿ ಜಿಲ್ಲೆಗೆ ಆಗಮಿಸಿದ ಗಡ್ಕರಿ, ಮಣಿಪಾಲ ವಿವಿಗೆ ಭೇಟಿ ನೀಡಿದ ಬಳಿಕ ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿವ್ಯೆ ಹೊಟೇಲ್‌ನ ಚೈತ್ಯ ಹಾಲ್‌ನಲ್ಲಿ ಟಿ.ಎ.ಪೈ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ವತಿಯಿಂದ ಆಯೋಜಿಸಲಾದ ನಾಯಕತ್ವ ಉಪನ್ಯಾಸ ಮಾಲಿಕೆಯ 22ನೆ ಕಾರ್ಯಕ್ರಮದಲ್ಲಿ ‘ಅಭಿವೃದ್ಧಿಗಾಗಿ ಶಿಕ್ಷಣ’ ವಿಷಯದ ಕುರಿತು ಮಾತನಾಡುತ್ತಿದ್ದರು.
ಟ್ಯಾಪ್ಮಿಯ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ರಾಮದಾಸ ಎಂ.ಪೈ ನಿತಿನ್ ಗಡ್ಕರಿ ಅವರನ್ನು ಸಂಸ್ಥೆಯ ಪರವಾಗಿ ಗೌರವಿಸಿದರು. ಆಡಳಿತ ಮಂಡಳಿ ಸದಸ್ಯ ಡಾ.ರಂಜನ್ ಪೈ ಉಪಸ್ಥಿತರಿದ್ದರು. ಟ್ಯಾಪ್ಮಿಯ ನಿರ್ದೇಶಕ ಡಾ.ಆರ್.ಸಿ.ನಟರಾಜನ್ ಸ್ವಾಗತಿಸಿದರು.
ವಿದ್ಯಾರ್ಥಿಗಳಿಗೆ ಗುತ್ತಿಗೆ
ದೇಶದ ಐಟಿಐ, ಇಂಜಿನಿಯರಿಂಗ್ ಕಾಲೇಜು ಹಾಗೂ ವಿವಿಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಹೊಸ ಹೊಸ ಆಲೋಚನೆಗಳಿವೆ. ಆದರೆ ಅವರಿಗೆ ಅವಕಾಶಗಳ ಕೊರತೆ ಇದೆ. ಇದನ್ನು ಮನಗಂಡು ದೇಶದ ರಸ್ತೆ ನಿರ್ಮಾಣದಲ್ಲಿ ವಿದ್ಯಾರ್ಥಿಗಳಿಗೂ ಅವಕಾಶ ನೀಡಲು ಚಿಂತನೆ ನಡೆಯುತ್ತಿದ್ದು, ಡಿಪಿಆರ್ ತಯಾರಿ ಹಾಗೂ ರಸ್ತೆಯ ಗುತ್ತಿಗೆಯನ್ನು ಇಂಜಿನಿಯರಿಂಗ್ ಕಾಲೇಜು ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ನೀಡುವುದಾಗಿ ತಿಳಿಸಿದರು.
ಇದರೊಂದಿಗೆ ದೇಶದ ನದಿಗಳನ್ನು ಬಳಸಿಕೊಂಡು ಒಳಸಾರಿಗೆಯನ್ನು ಆರಂಭಿಸಲು ಯೋಜನೆಗಳನ್ನು ರೂಪಿಸುತ್ತಿದ್ದು, ಇದರಿಂದ ರಸ್ತೆ ಮತ್ತು ರೈಲು ಮಾರ್ಗಕ್ಕಿಂತಲೂ ಭಾರೀ ಕಡಿಮೆ ಖರ್ಚಿನಲ್ಲಿ ಪ್ರಯಾಣ ಹಾಗೂ ಸರಕು ಸಾಗಣೆ ಮಾಡಲು ಸಾಧ್ಯವಿದೆ ಎಂದರು.







