ನೀತಿ, ಆಡಳಿತದಲ್ಲಿ ದೊಡ್ಡ ಪ್ರಮಾದ ಆಗಿಲ್ಲ: ಜೇಟ್ಲಿ

ಹೊಸದಿಲ್ಲಿ, ಮಾ.28: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಆಡಳಿತಾವಧಿಯಲ್ಲಿ ಇದುವರೆಗೆ ಯಾವುದೇ ಪ್ರಮುಖ ಪ್ರಮಾದಗಳು ಆಡಳಿತ ಹಾಗೂ ನೀತಿ ವಿಚಾರದಲ್ಲಿ ಆಗಿಲ್ಲ ಎಂದು ಹಣಕಾಸು ಸಚಿವ ಅರುಣ್ ಜೇಟ್ಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಸರಕಾರ ನಿಗದಿತ ಗುರಿಯತ್ತ ಮುನ್ನುಗ್ಗುತ್ತಿದೆ. ಹಿಂದಿನ ಸರಕಾರದಂತೆ ಯಾವ ಸಹಭಾಗಿತ್ವದ ಅಂಶಗಳನ್ನೂ ಪರಿಗಣಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಮೋದಿ ಸರಕಾರ ಎರಡು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮಹತ್ವದ ಸಾಧನೆಗಳೇನು ಎಂದು ಜೇಟ್ಲಿಯವರನ್ನು ಪ್ರಶ್ನಿಸಲಾಗಿತ್ತು.
ಎಲ್ಲ ಕ್ಷೇತ್ರಗಳಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳುವುದು, ಸರಕಾರದ ಯಾವುದೇ ಇಲಾಖೆಯ ನಿರ್ಧಾರಗಳು ಸುಧಾರಣೆಯ ದೃಷ್ಟಿಯನ್ನು ಇಟ್ಟಿರುವುದು ದಿಟ್ಟ ಹಾಗೂ ಸ್ಪಷ್ಟ ಸೂಚನೆಗಳನ್ನು ನೀಡುತ್ತಿರುವುದು ಸರಕಾರದ ಮಹತ್ವದ ಸಾಧನೆಗಳು ಎಂದು ಬಿಂಬಿಸಿದರು.
ಹಿಂದಿನ ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ ಇತ್ತು ಎಂದು ಜೇಟ್ಲಿ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದರು. ಸರಕಾರ ಇನ್ನೂ ಆರಂಭಿಕ ದಿನಗಳಲ್ಲಿದ್ದು, ನಿಗದಿತ ಗುರಿಯಲ್ಲಿ ಮುನ್ನಡೆಯುವುದು ಮುಖ್ಯ. ಇಂದಿನ ಹಾಗೂ ಹಿಂದಿನ ಸರಕಾರಗಳನ್ನು ತುಲನೆ ಮಾಡಿದಾಗ, ಮೋದಿ ಸರಕಾರದ ಸಾಧನೆ ವಿಭಿನ್ನವಾಗಿ ನಿಲ್ಲುತ್ತದೆ ಎಂದು ಜೇಟ್ಲಿ ವಿವರಿಸಿದರು.
ಸರಕಾರಕ್ಕೆ ಇದೀಗ ಎರಡು ವರ್ಷ ತುಂಬುತ್ತಿದ್ದು, ಕೇಂದ್ರ ಸುಧಾರಣೆ ಮತ್ತು ಪ್ರಗತಿಗೆ ವಿಶೇಷ ಗಮನ ನೀಡಲಿದೆ. ಈ ಮೂಲಕ ಸಂಪನ್ಮೂಲವನ್ನು ಉಳಿಸಿ, ಅದನ್ನು ದುರ್ಬಲ ವರ್ಗದವರ ಕಲ್ಯಾಣಕ್ಕೆ ಬಳಸಲಾಗುತ್ತದೆ. ಯಾವ ಕ್ಷೇತ್ರದಲ್ಲೂ ಬಿಜೆಪಿ ಸರಕಾರ ಲೋಪ ಮಾಡಿಲ್ಲ ಎಂದು ಹೇಳಿದರು. ಸರಕಾರ ಯಾವ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದಿತ್ತು ಎಂದು ಕೇಳಿದಾಗ, ಎಲ್ಲ ಕ್ಷೇತ್ರಗಳಲ್ಲಿ ಇನ್ನೂ ಉತ್ತಮ ಸಾಧನೆಗೆ ಅವಕಾಶವಿದೆ. ಆದರೆ ಜಾಗತಿಕ ಅಂಶಗಳು ಹೇಗಿರುತ್ತವೆ ಹಾಗೂ ನಮ್ಮ ಸ್ವಂತ ಪ್ರಜಾಪ್ರಭುತ್ವದ ಹಂತದ ಹಿನ್ನೆಲೆಯಲ್ಲಿ ಇದನ್ನು ನಿರ್ಧರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.





