ಎಲ್ಲಾ ತುರ್ತು ಸೇವೆಗಳಿಗೆ ‘112’ ನಂಬರ್‌ಶೀಘ್ರದಲ್ಲೇ ದೇಶಾದ್ಯಂತ ಜಾರಿ
ಹೊಸದಿಲ್ಲಿ, ಮಾ.28: ತುರ್ತು ಸನ್ನಿವೇಶಗಳಲ್ಲಿ ಪೊಲೀಸ್, ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕದಳ ಸೇವೆಗಳನ್ನು ಪಡೆಯಲು ಸಾರ್ವಜನಿಕರು ‘112’ ದೂರವಾಣಿ ಸಂಖ್ಯೆಗೆ ಕರೆ ಮಾಡುವಂತಹ ವ್ಯವಸ್ಥೆ ಶೀಘ್ರವೇ ಜಾರಿಗೆ ಬರಲಿದೆ.ದೇಶಾದ್ಯಂತ ವಿವಿಧ ತುರ್ತು ಸೇವೆಗಳಿಗೆ, ಒಂದೇ ರೀತಿಯ ದೂರವಾಣಿ ಸಂಖ್ಯೆಯನ್ನು ನಿಗದಿಪಡಿಸುವ ಟೆಲಿಕಾಂ ಆಯೋಗದ ಅಂತರ್ ಸಚಿವಾಲಯ ಸಮಿತಿ ಅನುಮೋದನೆ ನೀಡಿದೆ. ಅಮೆರಿಕದಲ್ಲಿ ಎಲ್ಲಾ ರೀತಿಯ ತುರ್ತು ಸೇವೆಗಳಿಗೆ ‘911’ ಸಂಖ್ಯೆಯನ್ನು ಬಳಸುವ ರೀತಿಯಲ್ಲಿ ಭಾರತದಲ್ಲಿ 112 ಸಂಖ್ಯೆ ಬಳಕೆಯಾಗಲಿದೆ.ಎಲ್ಲಾ ತುರ್ತು ಸೇವೆಗಳಿಗೆ 112ನ್ನು ಸಮಾನಸಂಖ್ಯೆಯಾಗಿ ಬಳಸುವ ಟ್ರಾಯ್‌ನ ಪ್ರಸ್ತಾಪಕ್ಕೆ ಟೆಲಿಕಾಂ ಆಯೋಗ ಸಮ್ಮತಿಸಿದೆ.ಟೆಲಿಕಾಂ ಸಚಿವರ ಅನುಮೋದನೆ ದೊರೆತ ಬಳಿಕ ಕೆಲವೇ ತಿಂಗಳೊಳಗೆ ಅದು ಜಾರಿಗೆ ಬರಲಿದೆಯೆಂದು ಮೂಲಗಳು ತಿಳಿಸಿವೆ.ಮೊಬೈಲ್ ಹಾಗೂ ದೂರವಾಣಿಗಳ ಮೂಲಕವೂ ಈ ಸೇವೆಯು ಲಭ್ಯವಿದೆ. ಕಾಲ್‌ಸೆಂಟರ್‌ನಂತಹ ಕೇಂದ್ರವೊಂದರ ಮೂಲಕ ಈ ಸೇವೆಯು ಕಾರ್ಯನಿರ್ವಹಿಸಲಿದೆ. ಹಿಂದಿ,ಇಂಗ್ಲೀಷ್ ಹಾಗೂ ಸ್ಥಳೀಯ ಭಾಷೆಯಲ್ಲಿ ಸೇವೆಯು ಲಭ್ಯವಿರುವುದು.





