ಐಸಿಸಿ ಮಹಿಳೆಯರ ವಿಶ್ವಕಪ್: ಶ್ರೀಲಂಕಾಕ್ಕೆ ಜಯ

ಬೆಂಗಳೂರು, ಮಾ.28: ಆರಂಭಿಕ ಆಟಗಾರ್ತಿ ಚಾಮರಿ ಅಟಪಟ್ಟು ಬಾರಿಸಿದ ಅರ್ಧಶತಕ ಹಾಗೂ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್‌ನ ಸಹಾಯದಿಂದ ಶ್ರೀಲಂಕಾ ಮಹಿಳಾ ತಂಡ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ಎ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡವನ್ನು ಕೇವಲ 10 ರನ್‌ಗಳ ಅಂತರದಿಂದ ಮಣಿಸಿತು.
ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ದಕ್ಷಿಣ ಆಫ್ರಿಕದ ಬೌಲರ್‌ಗಳು ಶ್ರೀಲಂಕಾವನ್ನು 7 ವಿಕೆಟ್‌ಗೆ 114 ರನ್‌ಗೆ ನಿಯಂತ್ರಿಸಿದರು. ಚಾಮಿರಿ(52 ರನ್, 49 ಎಸೆತ, 5 ಬೌಂಡರಿ, 1 ಸಿಕ್ಸರ್) ಆಫ್ರಿಕ ದಾಳಿಯನ್ನು ದಿಟ್ಟವಾಗಿ ಎದುರಿಸಿದರು.
ಆಫ್ರಿಕದ ಡೇನ್‌ವ್ಯಾನ್ ನಿಕರ್ಕ್(24ರನ್) ಹಾಗೂ ತ್ರಿಶಾ ಚೆಟ್ಟಿ(26) 9 ಓವರ್‌ಗಳಲ್ಲಿ 50 ರನ್ ಸೇರಿಸಿ ಉತ್ತಮ ಆರಂಭ ನೀಡಿದ್ದರು. ಆದರೆ, ಡೇನ್ ಔಟಾದ ನಂತರ ಕುಸಿತದ ಹಾದಿ ಹಿಡಿದ ಆಫ್ರಿಕ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಲಷ್ಟೇ ಶಕ್ತವಾಯಿತು.
ಲಂಕೆಯ ಪರ ಉದೇಶಿಕಾ ಪ್ರಬೋಧನಿ(2-13) ಹಾಗೂ ಸ್ಪಿನ್ನರ್ ಸುಗಂಧಿಕಾ ಕುಮಾರಿ(2-24) ತಲಾ 2 ವಿಕೆಟ್ ಪಡೆದರು.





