ಮರ್ಯಾದೆಯಿಂದ ಹಣ ವಾಪಸು ಮಾಡಿ; ಇಲ್ಲವೇ ಕಠಿಣ ಕ್ರಮ ಎದುರಿಸಿ
ಮಲ್ಯಗೆ ಹಣಕಾಸು ಸಚಿವರ ಸಂದೇಶ

ಹೊಸದಿಲ್ಲಿ , ಮಾ.28: ವಿಜಯ ಮಲ್ಯ ಅವರಂಥ ಉದ್ದೇಶಪೂರ್ವಕ ಸುಸ್ತಿದಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಮರ್ಯಾದೆಯಿಂದ ಬ್ಯಾಂಕ್‌ಗಳಿಗೆ ಸುಸ್ತಿ ಬಾಕಿ ಪಾವತಿಸಿ; ಇಲ್ಲವೇ ಸಾಲಗಾರರು ಹಾಗೂ ತನಿಖಾ ಏಜೆನ್ಸಿಗಳಿಂದ ಕಠಿಣ ಕ್ರಮ ಎದುರಿಸಲು ಸಿದ್ಧರಾಗಿ ಎಂದು ಹೇಳಿದ್ದಾರೆ.
ಯಾವುದೇ ವೈಯಕ್ತಿಕ ಪ್ರಕರಣಗಳ ಬಗ್ಗೆ ನಾನು ಉಲ್ಲೇಖಿಸುತ್ತಿಲ್ಲ. ಆದರೆ ವಿಜಯ ಮಲ್ಯ ಅವರ ಉದ್ಯಮ ಸಮೂಹದಂಥ ದೊಡ್ಡ ಸಂಸ್ಥೆಗಳು ಗೌರವಯುತವಾಗಿ ಸುಸ್ತಿಬಾಕಿ ಪಾವತಿಸುವುದು ಕ್ಷೇಮ ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ವಿಜಯ ಮಲ್ಯ ಅವರ ಉದ್ಯಮ ಸಮೂಹದ ಹಲವು ಅಡಮಾನಗಳನ್ನು ಬ್ಯಾಂಕ್‌ಗಳು ಹೊಂದಿವೆ. ಈ ಹಿನ್ನೆಲೆಯಲ್ಲಿ 9,000 ಕೋಟಿಗಿಂತಲೂ ಅಧಿಕವಾಗಿರುವ ಸುಸ್ತಿಸಾಲವನ್ನು ವಸೂಲು ಮಾಡಿಕೊಳ್ಳಲು ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಬ್ಯಾಂಕುಗಳಿಗೆ ಕೆಲ ಭದ್ರತೆಗಳಿವೆ; ಕಾನೂನು ಜಾರಿಯಂಥ ಕಠಿಣ ಕ್ರಮಗಳಿಗೆ ಅವಕಾಶವೂ ಇದೆ. ಇವೆಲ್ಲವನ್ನೂ ಆಯಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿವೆ ಎಂದು ವಿವರಿಸಿದರು.
ಕಿಂಗ್‌ಫಿಶರ್ ಸಮೂಹದ ಮಾಲಕ ವಿಜಯ ಮಲ್ಯ ಮಾರ್ಚ್ 2ರಂದು ದೇಶ ತೊರೆದು ಲಂಡನ್‌ಗೆ ಹೋಗಿದ್ದಾರೆ. ಅವರಿಂದ ಬರಬೇಕಾದ ಬಾಕಿ ವಸೂಲಾತಿಗೆ ಸುಪ್ರೀಂಕೋರ್ಟ್‌ನ ಮೊರೆ ಹೋಗುವ ಮುನ್ನಾದಿನವೇ ಅವರು ದೇಶ ಬಿಟ್ಟಿದ್ದಾರೆ. ಕಿಂಗ್‌ಫಿಶರ್ ಏರ್‌ಲೈನ್ಸ್ 7,800 ಕೋಟಿ ರೂ. ಸಾಲವನ್ನು 17 ಹಣಕಾಸು ಸಂಸ್ಥೆಗಳಿಗೆ ನೀಡಬೇಕಿದೆ. ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ 1,600 ಕೋಟಿ ರೂ., ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಐಡಿಬಿಐ ತಲಾ 800 ಕೋಟಿ ರೂ., ಬ್ಯಾಂಕ್ ಆಫ್ ಇಂಡಿಯಾ 650 ಕೋಟಿ, ಬ್ಯಾಂಕ್ ಆಫ್ ಬರೋಡಾ 550 ಕೋಟಿ ರೂ., ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 410 ಕೋಟಿ ರೂ.ವಸೂಲಿ ಮಾಡಿಕೊಳ್ಳಬೇಕಿದೆ. ಯೂಕೊಬ್ಯಾಂಕ್ 320 ಕೋಟಿ ವಸೂಲು ಮಾಡಿಕೊಂಡಿದ್ದು, ಕಾರ್ಪೊರೇಷನ್ ಬ್ಯಾಂಕ್ 310 ಕೋಟಿ ರೂ., ಸ್ಟೇಟ್‌ಬ್ಯಾಂಕ್ ಆಫ್ ಮೈಸೂರು 150 ಕೋಟಿ ರೂ., ಇಂಡಿಯನ್ ಓವರ್‌ಸೀಸ್ ಬ್ಯಾಂಕ್ 140 ಕೋಟಿ ರೂ., ಫೆಡರಲ್ ಬ್ಯಾಂಕ್ 90 ಕೋಟಿ ರೂ., ಪಂಜಾಬ್ ಆ್ಯಂಡ್ ಸಿಂಡ್ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್‌ಗಳಿಗೆ 50 ಕೋಟಿ ರೂ. ಬಾಕಿ ಇವೆ.







