ಉಡುಪಿ ನಗರಸಭೆಗೆ ಇಂದು ನೂತನ ಅಧ್ಯಕ್ಷರ ಆಯ್ಕೆ
‘
ಉಡುಪಿ, ಮಾ.28: ಉಡುಪಿ ನಗರಸಭೆ ಎರಡನೆ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮಾ.29ರಂದು ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ನಾಲ್ವರು ಆಕಾಂಕ್ಷಿಗಳಿರುವುದರಿಂದ ಗೊಂದಲ ಈಗಲೂ ಮುಂದುವರಿದೆ.
ಅಧ್ಯಕ್ಷ ಸ್ಥಾನ ಈ ಬಾರಿ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಆಕಾಂಕ್ಷೆಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಮೊದಲ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಕಿನ್ನಿಮುಲ್ಕಿ ವಾರ್ಡ್‌ನ ಸದಸ್ಯೆ ಅಮೃತಾ ಕೃಷ್ಣ ಮೂರ್ತಿ, ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿರುವ ಕೊಡವೂರು ವಾರ್ಡಿನ ಮೀನಾಕ್ಷಿ ಮಾಧವ ಬನ್ನಂಜೆ, ಕಡಿಯಾಳಿ ವಾರ್ಡಿನ ಗೀತಾ ಶೇಟ್, ಕಕ್ಕುಂಜೆ ವಾರ್ಡಿನ ಶೋಭಾ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.
ಆದರೆ ಇವರಲ್ಲಿ ಅಮೃತಾ ಕೃಷ್ಣಮೂರ್ತಿ ಹಾಗೂ ಮೀನಾಕ್ಷಿ ಮಧ್ಯೆ ಪ್ರಬಲ ಪೈಪೋಟಿ ಇದೆ. ಈ ಬಗ್ಗೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಮಾ.29ರಂದು ಸಭೆ ಕರೆದಿದ್ದು, ಪೂರ್ವಾಹ್ನ 11ಕ್ಕೆ ನಾಮಪತ್ರ ಸಲ್ಲಿಸುವ ಮೊದಲು ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ ಆಯ್ಕೆ ಮಾಡಲಿದ್ದಾರೆ. ಅಪರಾಹ್ನ 3 ಗಂಟೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವುದರಿಂದ ಕಾಂಗ್ರೆಸ್ ಪಕ್ಷದಲ್ಲಿರುವ ಏಕೈಕ ಸದಸ್ಯೆ ವಡಬಾಂಡೇಶ್ವರ ವಾರ್ಡ್‌ನ ಮೊದಲ ಬಾರಿಯ ಸದಸ್ಯೆ ಸಂಧ್ಯಾಕುಮಾರಿ ಆಯ್ಕೆ ಖಚಿತವಾಗಿದೆ.







