ಮಿಯಾಮಿ ಓಪನ್: ಜೊಕೊವಿಕ್ ನಾಲ್ಕನೆ ಸುತ್ತಿಗೆ ಲಗ್ಗೆ

ಮಿಯಾಮಿ, ಮಾ.28: ವಿಶ್ವದ ನಂ.1ಆಟಗಾರ ನೊವಾಕ್ ಜೊಕೊವಿಕ್ ಎಟಿಪಿ ಹಾಗೂ ಡಬ್ಲ್ಯುಟಿಎ ಮಿಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ನಾಲ್ಕನೆ ಸುತ್ತಿಗೆ ಪ್ರವೇಶಿಸಿದ್ದಾರೆ.
ಎರಡು ಬಾರಿಯ ಚಾಂಪಿಯನ್ ಜೊಕೊವಿಕ್ ರವಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ 3ನೆ ಸುತ್ತಿನ ಪಂದ್ಯದಲ್ಲಿ ಪೋರ್ಚುಗಲ್‌ನ 38ನೆ ರ್ಯಾಂಕಿನ ಜಾವೊ ಸೌಸಾರನ್ನು 6-4, 6-1 ಸೆಟ್‌ಗಳ ಅಂತರದಿಂದ ಮಣಿಸಿದರು. ಕೇವಲ 78 ನಿಮಿಷಗಳಲ್ಲಿ ಗೆಲುವು ಸಾಧಿಸಿರುವ ಜೊಕೊವಿಕ್ ಹಾರ್ಡ್‌ಕೋರ್ಟ್ ಟೂರ್ನಿಯಲ್ಲಿ ಸತತ 12ನೆ ಪಂದ್ಯವನ್ನು ಜಯಿಸಿದ್ದಾರೆ.
ಹಾಲಿ ಚಾಂಪಿಯನ್ ಜೊಕೊವಿಕ್ 2 ತಿಂಗಳ ಹಿಂದೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದರು. ದೋಹಾ ಹಾಗೂ ಇಂಡಿಯನ್ ವೇಲ್ಸ್ ಕಿರೀಟವನ್ನು ಧರಿಸಿರುವ ಜೊಕೊವಿಕ್ ಮಿಯಾಮಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದಾರೆ.
ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಆಸ್ಟ್ರೀಯದ ಡೊಮಿನಿಕ್ ಥಿಯೆಮ್‌ರನ್ನು ಎದುರಿಸಲಿದ್ದಾರೆ. ಥಿಯೆಮ್ ಮತ್ತೊಂದು ಪಂದ್ಯದಲ್ಲಿ ಜಪಾನ್‌ನ ಯೊಶಿಹಿಟಾ ನಿಶಿಯೊಕಾರನ್ನು 6-2, 6-2 ನೇರ ಸೆಟ್‌ಗಳಿಂದ ಮಣಿಸಿದ್ದರು.
ಕರ್ಬರ್, ಅಝರೆಂಕಾಗೆ ಮುನ್ನಡೆ:
ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆ್ಯಂಜೆಲಿಕ್ ಕೆರ್ಬರ್ ಹಾಗೂ ಕಳೆದ ವಾರ ಇಂಡಿಯನ್ ವೇಲ್ಸ್ ಟೂರ್ನಿಯನ್ನು ಜಯಿಸಿದ್ದ ವಿಕ್ಟೋರಿಯ ಅಝರೆಂಕಾ ಮಹಿಳೆಯರ ಸಿಂಗಲ್ಸ್‌ನಲ್ಲಿ ಅಂತಿಮ 16ರ ಸುತ್ತನ್ನು ಪ್ರವೇಶಿಸಿದ್ದಾರೆ.
ಜರ್ಮನಿಯ ಎರಡನೆ ಶ್ರೇಯಾಂಕದ ಕೆರ್ಬರ್ ಅವರು ಡಚ್‌ನ ಕಿಕಿ ಬೆರ್ಟೆನ್ಸ್ ವಿರುದ್ಧ 1-6, 6-2, 3-0 ಸೆಟ್‌ಗಳಿಂದ ಮುನ್ನಡೆಯಲ್ಲಿದ್ದಾಗ ಬೆರ್ಟೆನ್ಸ್ ಅಸೌಖ್ಯದಿಂದಾಗಿ ಪಂದ್ಯದಿಂದ ಹಿಂದೆ ಸರಿದರು.
2009 ಹಾಗೂ 2011ರಲ್ಲಿ ಮಿಯಾಮಿ ಓಪನ್ ಪ್ರಶಸ್ತಿ ಜಯಿಸಿದ್ದ, ಅಝರೆಂಕಾ ಪೊಲೆಂಡ್‌ನ ಮಗ್ಡಾ ಲಿನೆಟ್‌ರನ್ನು 6-3, 6-0 ಅಂತರದಿಂದ ಸೋಲಿಸಿದ್ದಾರೆ.
ಎರಡು ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಅಝರೆಂಕಾ ಅವರು ಸ್ಟೆಫಿ ಗ್ರಾಫ್ ಹಾಗೂ ಕಿಮ್ ಕ್ಲಿಜ್‌ಸ್ಟರ್ಸ್ ನಂತರ ಒಂದೇ ವರ್ಷ ಇಂಡಿಯನ್ ವೇಲ್ಸ್ ಹಾಗೂ ಮಿಯಾಮಿ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದಾರೆ.







