ರಾಜ್ಯಕ್ಕೆ ಹೆಚ್ಚುವರಿ 4,000 ಕಿ.ಮೀ. ರಾ.ಹೆದ್ದಾರಿ ರಸ್ತೆ: ಗಡ್ಕರಿ

ಶಿರಾಡಿ ಘಾಟಿ ಸುರಂಗ 2 ವರ್ಷಗಳಲ್ಲಿ ಪೂರ್ಣ
ಮಂಗಳೂರು, ಮಾ.28: ಕರ್ನಾಟಕ ರಾಜ್ಯವು ಪ್ರಸ್ತುತ 7,018 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಹೊಂದಿದೆ. ಪ್ರಸಕ್ತ 3,290 ಕಿ.ಮೀ. ಉದ್ದದ ರಸ್ತೆಗೆ ಈಗಾಗಲೇ ಅನುಮೋದನೆ ನೀಡಲಾಗಿದ್ದು, ಒಟ್ಟು ಅಂದಾಜು 10,300 ಕಿ.ಮೀ. ಆಗಿದ್ದು, ಹೆಚ್ಚುವರಿಯಾಗಿ 4,000 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಸೇರ್ಪಡೆಗೊಳಿಸುವುದಾಗಿ ಕೇಂದ್ರದ ಹಡಗು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.
ಪಣಂಬೂರಿನ ಜವಾಹರ್‌ಲಾಲ್ ನೆಹರೂ ಶತಮಾನೋತ್ಸವ ಭವನದಲ್ಲಿ ಇಂದು 2,358 ಕೋಟಿ ರೂ. ವೆಚ್ಚದಲ್ಲಿ 141 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಯೋಜನೆಗೆ ಶಿಲಾನ್ಯಾಸ ಹಾಗೂ ವಿವಿಧ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಣೆಗೊಳಿಸಿ ಅವರು ಮಾತನಾಡಿದರು.
ಹೆಚ್ಚುವರಿ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಅನುಮತಿ ನೀಡುವ ಕುರಿತಂತೆ ಈಗಾಗಲೇ ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ರಾಜ್ಯದ ಲೋಕೋಪಯೋಗಿ ಸಚಿವರ ಜತೆ ನಾನು ಚರ್ಚಿಸಿದ್ದೇನೆ. ರಾಜ್ಯದ ಸಚಿವರು ಹಾಗೂ ಸಂಸದರು ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ರಸ್ತೆಗಳ ಪಟ್ಟಿ ಒದಗಿಸಿದರೆ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು. ಕರ್ನಾಟಕ ಹೂಡಿಕೆದಾರರ ಸಮಾವೇಶದಲ್ಲಿ ಈಗಾಗಲೇ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಕನಿಷ್ಠ 1 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡುವುದಾಗಿ ರಾಜ್ಯದ ಜನತೆಗೆ ಭರವಸೆ ನೀಡಲಾಗಿದೆ ಎಂದರು.
ಜಲ ಸಾರಿಗೆಗೆ ಹೆಚ್ಚಿನ ಒತ್ತು
ಜಲ ಸಾರಿಗೆಯು ಅತೀ ಕಡಿಮೆ ವೆಚ್ಚದ ಸಾರಿಗೆಯಾಗಿದ್ದು ಅದಕ್ಕೆ ಒತ್ತು ನೀಡಲಾಗುತ್ತಿದೆ. 111 ನದಿಗಳನ್ನು ಜಲ ಮಾರ್ಗವಾಗಿ ಪರಿವರ್ತಿಸಲು ಚಿಂತನೆ ನಡೆಯುತ್ತಿದೆ. ಏರ್‌ಪೋರ್ಟ್ ನಂತೆ ವಾಟರ್‌ಪೋರ್ಟ್‌ಗಳನ್ನು ರಚಿಸಲಾಗುತ್ತಿದೆ. ಜಲಸಾರಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾಲ್ಡೀವ್ಸ್‌ನಲ್ಲಿರುವಂತೆ ಸೀಪ್ಲೇನ್ (ಸಮುದ್ರ ವಿಮಾನಯಾನ) ಆಸಕ್ತಿ ವಹಿಸಬೇಕಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಿಸಿದರು. ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ದೇಶದಲ್ಲಿ ಎರಡು ವರ್ಷದಲ್ಲಿ ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿ ನಡೆದಿದೆ.
ಬಜೆಟ್‌ನಲ್ಲಿ ಕೇವಲ ಹೆದ್ದಾರಿ ಅಭಿವೃದ್ಧಿಗೆ 55 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಹೆದ್ದಾರಿ ಸಚಿವಾಲಯ 1.2 ಲಕ್ಷ ಕೋಟಿ ರೂ. ಯೋಜನೆ ರೂಪಿಸಿದೆ. ಮುಂಬೈ- ಮಂಗಳೂರು ಮಧ್ಯೆ ಜಲಸಾರಿಗೆ ಆರಂಭಿಸಿದರೆ ಅನುಕೂಲವಾಗಲಿದೆ ಎಂದರು.
ರಾಜ್ಯ ಲೋಕೋಪಯೋಗಿ ಸಚಿವ ಡಾ..ಎಚ್.ಸಿ. ಮಹಾದೇವಪ್ಪ, ಸಂಸದ ನಳಿನ್ ಕುಮಾರ್ ಮಾತನಾಡಿದರು.
ಶಾಸಕ ಬಿ.ಎ. ಮೊಯ್ದೀನ್ ಬಾವ, ಹಾಸನದ ವಿಧನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಉಪಮೇಯರ್ ಸುಮಿತ್ರಾ ಕೆ., ಕಾರ್ಪೊರೇಟರ್‌ಗಳಾದ ಪ್ರತಿಭಾ ಕುಳಾಯಿ, ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಲೊಕೋಪಯೋಗಿ ಇಲಾಖೆಯ ಚ್ೀ ಎಂಜಿನಿಯರ್ ಲಕ್ಷ್ಮಣ ರಾವ್ ಪೇಶ್ವೆ ಸ್ವಾಗತಿಸಿದರು. ಅಧಿಕಾರಿ ರಾಜೀವ್ ರೆಡ್ಡಿ ವಂದಿಸಿದರು.
ಶಿರಾಡಿ ಘಾಟಿ ಸುರಂಗ 2 ವರ್ಷಗಳಲ್ಲಿ ಪೂರ್ಣ
ಬಹು ನಿರೀಕ್ಷೆಯ ಹಾಗೂ ಬಹುಪಯೋಗಿ 23.6 ಕಿ.ಮೀ. ಶಿರಾಡಿ ಸುರಂಗ ಮಾರ್ಗದ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಜೂನ್‌ನೊಳಗೆ ನೀಡಿದ್ದಲ್ಲಿ, ಡಿಸೆಂಬರ್‌ನೊಳಗೆ ಕೆಲಸ ಆರಂಭಿಸಿ, ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು.
ನಿತಿನ್ ಗಡ್ಕ್ಕರಿ, ಕೇಂದ್ರ ಹಡಗು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ







