ಮೀಸಲು ಸೀಟುಗಳನ್ನು ಬಿಟ್ಟುಕೊಡಿ
ಮಾನ್ಯರೆ,
ಇತ್ತೀಚೆಗಿನ ದಿನಗಳಲ್ಲಿ ಖಾಸಗಿ ಬಸ್ಸುಗಳ ಓಡಾಟ ರಂಪಾಟ ಬಹಳ ಜೋರಾಗಿದ್ದು, ಇದರಿಂದ ಜನ ಸಾಮಾನ್ಯರಿಗೆ ಅನನುಕೂಲವೇ ಹೆಚ್ಚಾಗಿದೆ. ಯಾವುದೇ ಬಸ್ಸಿನಲ್ಲಿ ಮಹಿಳೆಯರಿಗೆ ಕಾದಿರಿಸಿದ ಸೀಟುಗಳಲ್ಲಿ ಗಂಡಸರು ಕೂರುವಂತಿಲ್ಲ. ಇದು ಸರಿಯಾದ ಕ್ರಮ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಹಿರಿಯ ನಾಗರಿಕರು, ಮುದುಕರು, ನಿಲ್ಲಲೂ ಸಹ ಸಾಧ್ಯವಾಗದ ಗಂಡಸಗಾರಲಿ ಹೆಂಗಸರಾಗಲಿ, ಅಂಗ ವಿಕಲರಾಗಲಿ ಬಸ್ಸು ಹತ್ತಿದ ಸಂದರ್ಭಗಳಲ್ಲಿ ಅವರಿಗೆ ಕಾದಿರಿಸಲ್ಪಟ್ಟ 4 ಸೀಟುಗಳು ಪ್ರತಿಯೊಂದು ಬಸ್ಸಿನಲ್ಲಿದ್ದರೂ ಸಹ ಅದರಲ್ಲಿ ಯಾರೋ ಹುಡುಗರು ಅಥವಾ ಹುಡುಗಿಯರು ಕುಳಿತಿರುತ್ತಾರೆ. ವಯಸ್ಸಾದ ಮುದುಕರು ನಿಲ್ಲಲೂ ಕೂಡಾ ಸಾಧ್ಯವಾಗದೆ ಚಡಪಡಿಸುತ್ತಿರುತ್ತಾರೆ. ಇದು ಪ್ರತೀ ದಿನವೂ ಬಸ್ಸುಗಳಲ್ಲಿ ಕಂಡು ಬರುವಂತಹ ಪರಿಸ್ಥಿತಿ. ಇದು ಬಸ್ಸು ನಿರ್ವಾಹಕರಿಗೆ ತಿಳಿಯುವುದಿಲ್ಲವೇ? ಇದಕ್ಕೆ ಕಟ್ಟು ನಿಟ್ಟಿನ ಸೂಚನೆಯನ್ನು ಆರ್‌ಟಿಒ ನೀಡದಿದ್ದಲ್ಲಿ ಇಂತಹ ಹಿರಿಯ ನಾಗರಿಕರ, ಅಂಗವಿಕಲರ ಈ ಕಷ್ಟಗಳಿಗೆ ಪರಿಹಾರ ಇಲ್ಲದಾಗುವುದು ಖಂಡಿತ. ಮೊನ್ನೆ ಮೊನ್ನೆ ಇದನ್ನು ಪ್ರತಿಕ್ರಿಯಿಸುತ್ತಾ ಒಬ್ಬ ಧೀಮಂತ ರಾಜಕೀಯ ಧುರೀಣರು, ಮನೆಯಲ್ಲಿ ಈ ಬಗ್ಗೆ ಪೋಷಕರು ಯುವಕರುಗಳಿಗೆ ತಿಳಿಸಿಕೊಡಬೇಕೆಂದು ಅಭಿಪ್ರಾಯಿಸಿದ್ದಾರೆ. ಇದು ಬಹಳ ದೊಡ್ಡ ಮಾತಾಯ್ತು. ಅವರಿಗೆ ಕಾರಿನಲ್ಲಲ್ಲದೆ ಬಸ್ಸಿನಲ್ಲಿ ಸಂಚರಿಸಿ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಬಸ್ಸುಗಳಲ್ಲಿ ಅಕಾರ ವರ್ಗದವರು ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಕಾದಿರಿಸಿದ ಸೀಟಿನಲ್ಲಿ ಅವಕಾಶ ಮಾಡಲು ಹಿಂಜರಿದ ಪಕ್ಷದಲ್ಲಿ ಸಾರ್ವಜನಿಕರಿಂದ ಮುಷ್ಕರ ಅನಿವಾರ್ಯವಾಗುತ್ತದೆ.





