ಡಾ.ರಾಜ್ ಪುಸ್ತಕಕ್ಕೆ ಸ್ವರ್ಣಕಮಲ; ತಿಥಿ ಅತ್ಯುತ್ತಮ ಪ್ರಾದೇಶಿಕ ಚಿತ್ರ

ಹೊಸದಿಲ್ಲಿ /ಬೆಂಗಳೂರು, ಮಾ.28: ಕನ್ನಡ ಚಿತ್ರರಂಗದ ನಾಯಕನಟ ‘ಡಾ. ರಾಜ್‌ಕುಮಾರ್ ಸಮಗ್ರ ಚರಿತ್ರೆ’ ಪುಸ್ತಕಕ್ಕೆ ಸ್ವರ್ಣಕಮಲ ಪ್ರಶಸ್ತಿ ಹಾಗೂ ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ ‘ತಿಥಿ’ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. 63ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಕನ್ನಡಕ್ಕೆ 2 ಪ್ರತಿಷ್ಠಿತ ಪ್ರಶಸ್ತಿ ದೊರಕಿದೆ. ದೊಡ್ಡಹುಲ್ಲೂರು ರುಕ್ಕೋಜಿ ಅವರು ಬರೆದಿರುವ ‘ಡಾ. ರಾಜ್‌ಕುಮಾರ್ ಸಮಗ್ರ ಚರಿತ್ರೆ’ ಪುಸ್ತಕಕ್ಕೆ ಸ್ವರ್ಣಕಮಲ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ 75 ಸಾವಿರ ಮೊತ್ತದ ಬಹುಮಾನವನ್ನು ಒಳಗೊಂಡಿದ್ದು, ಅತ್ಯುತ್ತಮ ವರ್ಷದ ಪುಸ್ತಕ ಎನ್ನುವ ಹಿರಿಮೆಗೆ ಪಾತ್ರವಾಗಿದೆ, ಬೆಂಗಳೂರಿನ ನಿರ್ದೇಶಕ ರಾಮ್‌ರೆಡ್ಡಿ ಅವರ ‘ತಿಥಿ’ ಚೊಚ್ಚಲ ನಿರ್ದೇಶನದ ಚಲನಚಿತ್ರವಾಗಿದ್ದು ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ ಅತ್ಯುತ್ತಮ ಪ್ರಶಸ್ತಿಗೆ ಭಾಜನವಾಗಿದೆ.

ಡಾ.ರಾಜ್‌ಕುಮಾರ್ ಪುಸ್ತಕವನ್ನು ಪ್ರೀತಿ ಪ್ರಕಾಶನ ಸಂಸ್ಥೆ ಪ್ರಕಟಿಸಿದ್ದು, ಈ ಪುಸ್ತಕ ರೂಪುಗೊಳ್ಳಲು ದೊಡ್ಡಹುಲ್ಲೂರು ರಕ್ಕೋಜಿ ಅವರು ಸತತ 15 ವರ್ಷಗಳ ಕಾಲ ಶ್ರಮ ವಹಿಸಿದ್ದಾರೆ. 2 ಸಂಪುಟಗಳನ್ನು ಒಳಗೊಂಡಿರುವ ಡಾ.ರಾಜ್‌ಕುಮಾರ್ ಸಮಗ್ರ ಚರಿತ್ರೆ ಪುಸ್ತಕ ಪ್ರಕಟಣೆಗೆ ಅಂದಾಜು ರು. 88 ಲಕ್ಷ ರೂ. ವೆಚ್ಚವಾಗಿದೆ. 1ನೆ ಸಂಪುಟ ಸುಮಾರು 1,080 ಪುಟಗಳನ್ನು ಒಳಗೊಂಡಿದ್ದರೆ, 2ನೆ ಸಂಪುಟ 1,060 ಪುಟಗಳನ್ನು ಒಳಗೊಂಡಿದೆ. ಡಾ. ರಾಜ್‌ರ ಅಪರೂಪದ ಸಾವಿರಾರು ಚಿತ್ರಗಳನ್ನು ಒಳಗೊಂಡಿದೆ.
2010ರಲ್ಲಿ, 6 ವರ್ಷಗಳ ಹಿಂದೆ ಡಾ.ಕೆ. ಪುಟ್ಟಸ್ವಾಮಿ ಅವರ ‘ಸಿನಿಮಾ ಯಾನ’ ಕೃತಿಗೆ ಸ್ವರ್ಣ ಕಮಲ ಪ್ರಶಸ್ತಿ ಬಂದಿದ್ದನ್ನು ಇದೇ ಸಂದರ್ಭದಲ್ಲಿ ನೆನೆಯಬಹುದು.







