ನಾಳೆ ಎಸೆಸೆಲ್ಸಿ ಪರೀಕ್ಷೆ ಶುರು

ಪರೀಕ್ಷೆ ಬರೆಯಲಿರುವ 8,49,233 ವಿದ್ಯಾರ್ಥಿಗಳು
ಬೆಂಗಳೂರು, ಮಾ.28: ರಾಜ್ಯದೆಲ್ಲೆಡೆ ಮಾ.30ರಿಂದ ಎಸೆಸೆಲ್ಸಿ ಪರೀಕ್ಷೆಯ ಪ್ರಾರಂಭಗೊಳ್ಳುತ್ತಿದ್ದು, ಈ ಬಾರಿ 8,49,233 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಸತ್ಯಮೂರ್ತಿ ತಿಳಿಸಿದ್ದಾರೆ.
ಸೋಮವಾರ ನಗರದ ಪರೀಕ್ಷಾ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ 1,94,585 ಬಾಲಕರು, 1,83,116 ಬಾಲಕಿಯರು, ಗ್ರಾಮೀಣ ಪ್ರದೇಶದಲ್ಲಿ 2,56,055 ಬಾಲಕರು, 2,15,477 ಬಾಲಕಿಯರು ಪರೀಕ್ಷೆಯನ್ನು ಬರೆಯುತ್ತಿದ್ದಾರೆ ಎಂದು ತಿಳಿಸಿದರು.
ಸಿಸಿ ಟಿವಿ ಅಳವಡಿಕೆ: ಪರೀಕ್ಷೆಗೆ ಅಗತ್ಯವಿರುವ ಎಲ್ಲ ಪೂರ್ವ ಸಿದ್ಧತೆಗಳು ಮುಗಿದಿದ್ದು, 3,082 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ
ವಿಜಯಪುರದಿಂದ ಮುದ್ದೆಬಿಹಾಳಕ್ಕೆ ಪ್ರಶ್ನೆ ಪತ್ರಿಕೆ ಸಾಗಿಸುವಾಗ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿಗಳು ಹಬ್ಬಿಸಲಾಗಿತ್ತು. ಹೀಗಾಗಿ ಖುದ್ದು ಪರಿಶೀಲಿಸಿ ದಾಗ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಕಂಡುಬಂದಿಲ್ಲ. ಆದರೆ, ಪ್ರಶ್ನೆ ಪತ್ರಿಕೆ ಸಾಗಿಸುವ ವಾಹನದಲ್ಲಿ ಕ್ಷೇತ್ರ ಬಿಇಒ ಅಧಿಕಾರಿ ಇರಬೇಕಾಗಿತ್ತು. ಅವರು ಇರದಿದ್ದುದು ವದಂತಿಗಳಿಗೆ ಕಾರಣವಾಗಿದೆ.
- ಸತ್ಯಮೂರ್ತಿ, ಶಿಕ್ಷಣ ಇಲಾಖೆ ಆಯುಕ್ತ







