ತಮ್ಮನ ಆಟಿಸಂ ಸಮಸ್ಯೆ: ಸಮಾಜಕ್ಕೆ ಶಾಲೆ, ಆಪ್ ಗಿಫ್ಟ್ ಕೊಟ್ಟ ಸಹೋದರಿಯರು

ಬೆಂಗಳೂರು, ಮಾ.29: ಸಾಮಾಜಿಕ ಅನಿಷ್ಟ, ನಿರಾಕರಣೆ, ತಾರತಮ್ಯ, ಕೆಟ್ಟದಾಗಿ ನೋಡುವುದು- ಆಟಿಸಂ ಸಮಸ್ಯೆಯ ಮಕ್ಕಳ ಪೋಷಕರ ಪಾಡು ಅನುಭವಿಸಿದವರಿಗಷ್ಟೇ ಗೊತ್ತು. ಬಹುಶಃ ಜೂಹಿ ರಮಣಿ ಹಾಗೂ ಬಾಬಿ ಸಹೋದರಿಯರಿಗೆ ಈ ಕಿರಿ ಕಿರಿ ಅನುಭವಕ್ಕೆ ಬಂದಿರಬೇಕು. ಆಟಿಸಂ ಸಮಸ್ಯೆ ಇದ್ದ ತಮ್ಮನ ಪಾಡನ್ನು ಕಣ್ಣಾರೆ ಕಂಡ ಈ ದಿಟ್ಟ ಸಹೋದರಿಯರು ತಲೆ ಮೇಲೆ ಕೈಹೊತ್ತು ಕೂರುವ ಬದಲು ಇಂಥ ಅಸಂಖ್ಯಾತ ಮಕ್ಕಳ ನೆರವಿಗೆ ಮುಂದಾಗಿದ್ದಾರೆ.
ಆಟಿಸಂ ಮಕ್ಕಳ ಮತ್ತು ಅವರ ಕುಟುಂಬದ ಕಣ್ಣೀರು ಒರೆಸುವ ಕಾರ್ಯಕ್ಕೆ ಈ ಸಹೋದರಿಯರು ಪಣ ತೊಟ್ಟಿದ್ದಾರೆ. ಈಗಾಗಲೇ ಆಟಿಸಂ ಸಮಸ್ಯೆ ಇರುವ ಮಕ್ಕಳಿಗಾಗಿ ಲಕ್ನೋ ಹಾಗೂ ಬೆಂಗಳೂರಿನಲ್ಲಿ ಎರಡು ಶಾಲೆ ತೆರೆದಿರುವ ಇವರು ಆಟಿಸಂ ಮಕ್ಕಳ ಪೋಷಕರ ಅನುಕೂಲಕ್ಕಾಗಿ ಆಪ್ ಕೂಡಾ ಅಭಿವೃದ್ಧಿಪಡಿಸಿದ್ದಾರೆ.
ಈ ಉದ್ದೇಶಕ್ಕಾಗಿಯೇ ಐ ಸಪೋರ್ಟ್ ಎಂಬ ಸ್ವಯಂಸೇವಾ ಸಂಸ್ಥೆ ತೆರೆದಿದ್ದಾರೆ. "ನಾವು ಅನುಭವಗಳಿಂದ ಪಾಠ ಕಲಿತೆವು. ನಮ್ಮ ಸಹೋದರ ಶಿವಂ ಆಟಿಸಂ ಚಿಕಿತ್ಸೆ ಪಡೆಯುತ್ತಿದ್ದಾಗ ನಮಗೆ ಒಂಬತ್ತು ವರ್ಷ. ಆತ ಇನ್ನೂ ಮೂರರ ಪೋರ. ರಾಯಬರೇಲಿಯಲ್ಲಿದ್ದ ನಾವು ಆತನ ಚಿಕಿತ್ಸೆ ಸಲುವಾಗಿ ಲಕ್ನೋಗೆ ಬಂದೆವು. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಯಾವುದು ಉತ್ತಮ ಶಾಲೆ ಎಂದು ತಿಳಿಯಲಿಲ್ಲ. ಆಟಿಸಂ ಮಕ್ಕಳ ಆರೈಕೆ ಹೇಗೆ ಎನ್ನುವುದೂ ನಮಗೆ ತಿಳಿದಿರಲಿಲ್ಲ" ಎಂದು ಈ ಸಹೋದರಿಯರು ಹಿನ್ನೆಲೆ ವಿವರಿಸಿದರು.
ಕೆಲ ವರ್ಷಗಳ ಬಳಿಕ ಜೂಹಿ ವಿಪ್ರೊದಲ್ಲಿ ಉದ್ಯೋಗ ಪಡೆದ ಬಳಿಕ ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆಗಳಲ್ಲಿ ಸ್ವಯಂಸೇವಕಿಯಾಗಿ ಸೇವೆ ಸಲ್ಲಿಸಿದರು. ಹದಿನೈದು ವರ್ಷ ಬಳಿಕವೂ ಆಟಿಸಂ ಮಕ್ಕಳ ಪೋಷಕರು ಅದೇ ಸಮಸ್ಯೆ ಎದುರಿಸುತ್ತಿರುವುದು ಮನಗಂಡು ಅವರ ಉಪಯೋಗಕ್ಕಾಗಿ ಆಪ್ ಅಭಿವೃದ್ಧಿಪಡಿಸಿದರು. ಇದರಲ್ಲಿ ಅವರಿಗೆ ಉತ್ತಮ ಶಾಲೆ, ಆಸ್ಪತ್ರೆ, ಚಿಕಿತ್ಸಕರು ಹೀಗೆ ಹಲವು ಮಾಹಿತಿಗಳು ಇವೆ.
ಇದೀಗ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಿಶೇಷ ಶಾಲೆಯನ್ನೂ ಆರಂಭಿಸಿದ್ದು, ಆಟಿಸಂ ಸಮಸ್ಯೆ ಇರುವ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಇದರ ಉದ್ದೇಶ ಎಂದು ಅವರು ವಿವರಿಸುತ್ತಾರೆ.







