ನಿದ್ದೆಗೆಡುವುದರಿಂದ ನಿಮ್ಮ ಮೆದುಳಿಗೆ ಅಪಾಯ!
ಪ್ರತಿಯೊಬ್ಬರೂ ಬ್ಯುಸಿಯಾಗಲು ಏನಾದರೂ ಒಂದು ಕಾರಣವಿರುತ್ತದೆ. ಆದರೆ ಸಾಮಾನ್ಯವಾಗಿ ಮಾಡಬೇಕಾಗಿರುವುದೆಲ್ಲವನ್ನೂ ಮಾಡಲು ಎಚ್ಚರವಾಗಿರುವ ಸಮಯ ಸಾಕಾಗುವುದಿಲ್ಲ. ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಮನೆಯಲ್ಲಿಯೇ ಇರುವವವರೂ ಸಹ ನಿದ್ದೆಯ ಸಮಯವನ್ನು ಕಡಿತಗೊಳಿಸುತ್ತಾರೆ. ಇದರಿಂದ ಕೆಲವು ಉತ್ತಮ ಫಲ ಸಿಗಬಹುದಾದರೂ ನಿದ್ದೆಯ ಕೊರತೆ ಆರೋಗ್ಯಕಾರಿಯಲ್ಲ. ನಿದ್ದೆಯ ಕೊರತೆ ನಿಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಮಂದಗತಿಯವರಾಗುತ್ತೀರಿ ಮತ್ತು ತೂಕದಲ್ಲಿ ಏರಿಳಿತವಾಗುತ್ತದೆ. ಮಧುಮೇಹ ಮೊದಲಾದ ರೋಗಗಳೂ ಬರಬಹುದು.
ಬೇಗ ಮುಪ್ಪಾಗುವುದು
ಕೊಬ್ಬು ಮತ್ತು ಮಾರಕ ರೋಗಗಳ ಹೊರತಾಗಿ ನಿದ್ದೆಯ ಕೊರತೆಯಿಂದ ಬರುವ ಸಾಮಾನ್ಯ ಸಮಸ್ಯೆಯೆಂದರೆ ಬುದ್ಧಿ ಮಾಂದ್ಯತೆ. ಈ ಅಭ್ಯಾಸ ಧೀರ್ಘ ಕಾಲ ಇದ್ದರೆ ಬೇಗನೇ ಮರಣ ಬರಬಹುದು. ಚಯಾಪಚಯ ಸರಿಯಾಗಿ ಕೆಲಸ ಮಾಡದೆ ಬೇಗನೇ ಮುಪ್ಪು ಬರಬಹುದು.
ಮೆದುಳಿನ ಪ್ರಕ್ರಿಯೆಯಲ್ಲಿ ದೋಷ
ಸರಿಯಾಗಿ ನಿದ್ದೆಯಿಲ್ಲದಿದ್ದರೆ ಮೆದುಳಿನ ಕಾರ್ಯದಲ್ಲಿ ದೋಷ ಕಾಣಬಹುದು. ಏಕೆಂದರೆ ಫ್ರಂಟಲ್ ಲೋಬ್‌ಗೆ ಸಾಕಷ್ಟು ರಕ್ತ ಪರಿಚಲನೆಯಾಗುವುದಿಲ್ಲ. ಹೀಗಾಗುತ್ತಲೇ ನಿಮ್ಮ ಮೆದುಳಿನ ಅಲೆಗಳು ನಿಧಾನವಾಗುತ್ತದೆ. ನಿರ್ಧಾರ ಕೈಗೊಳ್ಳುವುದರ ಮೇಲೆ ಪರಿಣಾಮ ಬೀರಿ ಸ್ಪಷ್ಟವಾಗಿ ಯೋಚಿಸುವುದು ಸಾಧ್ಯವಾಗುವುದಿಲ್ಲ.
ಕೊಳಕು ಮೆದುಳು
ಸಕ್ರಿಯ ಮೆದುಳು ಎಂದರೆ ಬ್ಯುಸಿಯಾಗಿರುವ ಯಂತ್ರದ ಹಾಗೆ. ಬೇಗನೇ ಕೊಳಕಾಗುತ್ತದೆ. ಹೀಗಾಗಿ ಕೊಳೆಯನ್ನು ತೆಗೆಯಲು ನಿದ್ದೆ ಅವಶ್ಯಕ. ನಿದ್ದೆಯಿಂದ ಸೆರೆಬ್ರೊಸ್ಪಿನಲ್ ಫ್ಲೂಯಿಡ್ ಕೊಳೆ ನಿವಾರಿಸುತ್ತದೆ. ಸರಿಯಾಗಿ ನಿದ್ದೆ ಬಾರದೆ ಇದ್ದಲ್ಲಿ ನಿಮ್ಮ ಮೆದುಳು ಕೊಳಕು ತುಂಬಿಕೊಂಡರೆ ಆರೋಗ್ಯಕಾರಿ ಎನ್ನಲು ಸಾಧ್ಯವಿಲ್ಲ.
ಒತ್ತಡ ದ್ವಿಗುಣ
ನೀವು ಸುಸ್ತಾದಾಗ ಮತ್ತು ನಿದ್ದೆ ಬಂದಂತಿದ್ದರೆ ನಿಮ್ಮ ನಿತ್ಯದ ಕಾರ್ಯಗಳಾಗಿರುವ ನಾಯಿಯ ಜೊತೆ ನಡೆಯುವುದು, ಸಾಮಾನು ಸರಂಜಾಮು ತರುವುದು, ಮನೆಗೆ ವಾಹನ ಚಲಾಯಿಸುವುದು ಮೊದಲಾದ ಕೆಲಸವೇ ಸುಸ್ತು ಹೊಡೆಸಬಹುದು. ನಿಮ್ಮ ಒತ್ತಡದ ಸಹಿಷ್ಣುತೆ ಇಳಿಕೆಯಾಗಿ ಖಿನ್ನತೆಗೆ ಕಾರಣವಾಗಬಹುದು.
ನಿದ್ದೆಗೆ ಸಾಕಷ್ಟು ಗಮನ ಕೊಡದವರು ನೀವಾಗಿದ್ದರೆ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಅಪಾಯಕ್ಕೆ ಹಾಕುತ್ತೀರಿ. ಜಾಗ್ರತೆ.