- ನೀವೂ ಲಾಭ ಪಡೆಯಿರಿ, ಇತರರಿಗೂ ತಿಳಿಸಿ
ಪ್ರತಿಭಾ ಪಲಾಯನ ತಡೆಯಲು ಬಂದಿದೆ ಕೇಂದ್ರದ ಹೊಸ ಯೋಜನೆ

ನವದೆಹಲಿ, ಮಾ.29: ಪ್ರತಿಭಾ ಪಲಾಯನವನ್ನು ತಡೆಯುವ ನಿಟ್ಟಿನಲ್ಲಿ ಮೂಲ ವಿಜ್ಞಾನ ಸಂಶೋಧನಾರ್ಥಿಗಳಿಗೆ ಅನುದಾನ ಕೊಡುವ ಫೆಲೋಶಿಪ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಪಿಎಚ್‌ಡಿ ಮಾಡಿದವರು ನಂತರದ ಸಂಶೋಧನೆಯನ್ನು ಭಾರತದಲ್ಲಿ ನಡೆಸಲು ಇದನ್ನು ಬಳಸಿಕೊಳ್ಳಬಹುದು.
ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ಆಶುತೋಷ್ ಶರ್ಮಾ ಪ್ರಕಾರ, ಸಂಶೋಧನಾ ವಿದ್ಯಾರ್ಥಿಗಳಿಗೆ ತಿಂಗಳಿಗೆ ರೂ. 50,000ವನ್ನು ಮೂರು ವರ್ಷಗಳ ಅವಧಿಗೆ ಒದಗಿಸಲಾಗುವುದು. ಸಂಶೋಧನೆ ಮಾಡುವುದಕ್ಕಾಗಿ ವಾರ್ಷಿಕ ರೂ. 7 ಲಕ್ಷವನ್ನು ಮೂಲ ಅನುದಾನವಾಗಿಯೂ ಕೊಡಲಾಗುವುದು.
ರಾಷ್ಟ್ರೀಯ ಡಾಕ್ಟರೇಟ್ ನಂತರದ ಈ ಫೆಲೋಶಿಪ್ ಅನ್ನು ತಿಂಗಳ ಹಿಂದೆ ಆರಂಭಿಸಲಾಗಿದೆ. ವರ್ಷಕ್ಕೆ ಈ ಯೋಜನೆಯಲ್ಲಿ 1,000 ಸಂಶೋಧಕರಿಗೆ ಅನುದಾನ ಸಿಗಲಿದೆ. ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬಹುತೇಕ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ನಂತರದ ಪದವಿಯನ್ನು ಕೇಳುವ ಕಾರಣ ಸಂಶೋಧನಾ ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಬಳಿಕ ಕೆಲಸ ಹುಡುಕಲು ಕಷ್ಟವಾಗಿ ವಿದೇಶಗಳಿಗೆ ಹೋಗುತ್ತಾರೆ. ವಿದೇಶದಲ್ಲಿ ಪಿಚ್‌ಡಿ ಪದವೀಧರರಿಗೆ ಅನುದಾನ ಒದಗಿಸುವ ಸಂಸ್ಥೆಗಳಿವೆ. ಇದೇ ಕಾರಣದಿಂದ ಹೊಸ ಯೋಜನೆ ಆರಂಭಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.
ಮೂರು ವರ್ಷದ ಫೆಲೋಶಿಪ್ ಅವಧಿಯಲ್ಲಿ ವಿದ್ಯಾರ್ಥಿಗಳು ಭಾರತೀಯ ವಿಶ್ವವಿದ್ಯಾಲಯ ಮತ್ತು ಸಂಸ್ಥೆಗಳ ಉದ್ಯೋಗಕ್ಕಾಗಿ ತಯಾರಿ ನಡೆಸಬಹುದು. ಒಮ್ಮೆ ಉದ್ಯೋಗ ಪಡೆದರೆ ವಿದೇಶಕ್ಕೆ ಹೋಗುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಬಳಿ ಎಷ್ಟು ಸಂಶೋಧನಾ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿದ್ದಾರೆ ಎನ್ನುವ ವಿವರಗಳಿಲ್ಲ. ಹೀಗೆ ವಿದೇಶಕ್ಕೆ ತೆರಳಿದ ವಿದ್ಯಾರ್ಥಿಗಳ ವಿವರ ಪತ್ತೆ ಮಾಡುವುದು ಕಷ್ಟ ಎಂದು ಸಚಿವಾಲಯದ ಅಧಿಕಾರಿಗಳು ಹೇಳುತ್ತಾರೆ. ಅಲ್ಲದೆ ಗೃಹ ಸಚಿವಾಲಯ ಅಥವಾ ವಿದೇಶಾಂಗ ಸಚಿವಾಲಯದ ಬಳಿ ಈ ಬಗ್ಗೆ ಮಾಹಿತಿಗಳೂ ಇಲ್ಲ.
ಈ ಫೆಲೋಶಿಪ್ ಪಡೆಯಲು ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನಾ ಪ್ರಸ್ತಾಪ ಕಳುಹಿಸಬೇಕು. ವಿಶ್ವವಿದ್ಯಾಲಯ/ ಸಂಸ್ಥೆಯು ಆ ಸಂಶೋಧನಾ ಪ್ರಸ್ತಾಪವನ್ನು ಒಪ್ಪಿಕೊಳ್ಳುವುದು ಕಡ್ಡಾಯವಾಗಿದೆ.







