ಬೆಂಗಳೂರು : ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ, ವಾರದ ಐದು ದಿನಗಳ ಹಾಲು ಪೂರೈಸಲು ರಾಜ್ಯ ಸರ್ಕಾರ ನಿರ್ಧಾರ
.jpg)
ಬೆಂಗಳೂರು, ಮಾ.29: ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ವಾರದ ಐದು ದಿನಗಳ ಹಾಲು ಪೂರೈಸಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಕ್ಷೀರ ಕ್ರಾಂತಿಯಾಗುತ್ತಿದ್ದು, ಇದರ ಪರಿಣಾಮ ಮೂರು ದಿನಗಳಿಂದ ಐದು ದಿನಗಳ ಕಾಲ ಹಾಲು ವಿತರಿಸಲು ಸರ್ಕಾರ ಉದ್ದೇಶಿಸಿದೆ. ಇಡೀ ಜಗತ್ತಿನಲ್ಲಿ ಭಾರತ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನಕ್ಕೇರಿದ್ದು, ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರುವ ಹಾಲನ್ನು ಮಕ್ಕಳ ಆರೋಗ್ಯ ವರ್ಧನೆಗೆ ಬಳಸಿಕೊಳ್ಳಲು ತೀರ್ಮಾನಿಸಿದೆ. ಐದು ದಿನಗಳ ಕಾಲ ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಹಾಲನ್ನು ಒದಗಿಸುವುದರಿಂದ ಬೊಕ್ಕಸಕ್ಕೆ 300 ಕೋಟಿ ರೂಗಳಷ್ಟು ಹೊರೆ ಬೀಳಿದೆ. ರಾಜ್ಯದಲ್ಲಿ ಪ್ರತಿನಿತ್ಯ 67 ಲಕ್ಷ ಲೀಟರುಗಳಷ್ಟು ಹಾಲು ಉತ್ಪಾದನೆಯಾಗುತ್ತಿದ್ದು ಗೃಹ ಬಳಕೆ ಹಾಗೂ ಪರರಾಜ್ಯಗಳಿಗೆ ಸರಬರಾಜು ಮಾಡುತ್ತಿರುವ ಹಾಲು ಸೇರಿದಂತೆ ಖರ್ಚಾಗುತ್ತಿರುವ ಒಟ್ಟಾರೆ ಹಾಲಿನ ಪ್ರಮಾಣ ಗರಿಷ್ಠ 40 ಲಕ್ಷ ಲೀಟರುಗಳಷ್ಟಿದೆ.
ಉಳಿದಂತೆ ಎಲ್ಲ ಹಾಲನ್ನು ಪೌಡರ್ ಮಾಡಲು, ಬೆಣ್ಣೆ ಮಾಡಲು, ಇನ್ನಿತರ ಖಾದ್ಯಗಳನ್ನು ತಯಾರಿಸಲು ಬಳಕೆ ಮಾಡಬೇಕಾದ ಅನಿವಾರ್ಯ ಸ್ಥಿತಿಯಿದೆ. ಅದರ ಪ್ರಕಾರ ತಯಾರಾಗುತ್ತಿರುವ ಹಾಲಿನ ಪೌಡರ್ ಪ್ರಮಾಣ ಹಾಗೂ ಬೆಣ್ಣೆಯ ಪ್ರಮಾಣ ಮಿತಿ ಮೀರಿ ಹೆಚ್ಚಿದ್ದು ಈ ಹಿನ್ನೆಲೆಯಲ್ಲಿ ಅದನ್ನು ವಿಲೇವಾರಿ ಮಾಡುವುದು ಕಷ್ಟದ ವಿಷಯವಾಗಿ ಪರಿಣಮಿಸಿದೆ.
ಹೀಗೆ ಹೆಚ್ಚುವರಿಯಾಗಿ ಬರುತ್ತಿರುವ ಹಾಲನ್ನು ತಡೆಯಲು ಸಾಧ್ಯವೂ ಇಲ್ಲ.ರೈತರಿಗೆ ನೀಡುತ್ತಿರುವ ಅನುಕೂಲವನ್ನು ನಿಲ್ಲಿಸಲೂ ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಈ ಹಿಂದೆ ವಾರದ ಮೂರು ದಿನಗಳ ಕಾಲ ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಹಾಲನ್ನು ಒದಗಿಸಲು ತೀರ್ಮಾನಿಸಲಾಗಿತ್ತು.
ಆದರೆ ಇಷ್ಟು ಮಾಡಿದ ನಂತರವೂ ಸಮಸ್ಯೆ ದೊಡ್ಡ ಮಟ್ಟದಲ್ಲೇನೂ ನಿವಾರಣೆಯಾಗಿಲ್ಲ. ಹೀಗಾಗಿ ಹೆಚ್ಚುವರಿ ಹಾಲಿನ ಸಮಸ್ಯೆಯನ್ನು ಪರಿಹರಿಸದಿದ್ದರೆ ಕೆಎಂಎಫ್ ಕಷ್ಟಪಡುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸಂಸ್ಥೆ ಮುಖ್ಯಮಂತ್ರಿಗಳ ಬಳಿ ಸಂಕಟ ತೋಡಿಕೊಂಡಿದೆ.
ಹೀಗಾಗಿ ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ ಮೂರು ದಿನಗಳ ಕಾಲ ಒದಗಿಸುತ್ತಿದ್ದ ಹಾಲನ್ನು ಇನ್ನು ಮುಂದೆ ವಾರದ ಐದು ದಿನಗಳ ಕಾಲ ವಿಸ್ತರಿಸಲು ಸರ್ಕಾರ ಮುಂದಾಗಿದೆ.







