ಮಂಗಳೂರು : ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಿದ್ಧತಾ ಸಭೆ
ಮಂಗಳೂರು, ಮಾ. 29: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಸಿದ್ದತೆ ಬಗ್ಗೆ ಇಂದು ಜಿಲ್ಲಾಧಿಕಾರಿ ಹಾಗೂ ಉಪ ಆಯುಕ್ತರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಕಚೇರಿಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವವನ್ನು ಆಯೋಜಿಸುವ ಕುರಿತು ಚರ್ಚಿಸಲಾಯಿತು. ಇದುವರೆಗೂ ನಡೆದಿರುವ ಸಿದ್ದತೆಗಳ ಬಗ್ಗೆ ಪರಿಶೀಲಿಸಲಾಯಿತು. ಭಕ್ತಾದಿಗಳಿಗೆ ಮತ್ತು ಸಾರ್ವಜನಿಕರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಮೂಲಕ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಸಹ ಚರ್ಚಿಸಲಾಯಿತು. ಕುಡಿಯುವ ನೀರಿನ ವ್ಯವಸ್ಥೆ, ದೀಪದ ವ್ಯವಸ್ಥೆ, ಶುಚಿತ್ವದ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ಪಕ್ಕದಲ್ಲಿ ಹರಿಯುವ ತೋಡನ್ನು ಶುಚಿಗೊಳಿಸುವುದು, ಭಕ್ತಾದಿಗಳಿಗೆ ಭೋಜನ ವ್ಯವಸ್ಥೆ, ವಾಹನಗಳ ನಿಲುಗಡೆ ಮುಂತಾದ ವಿಷಯಗಳ ಕುರಿತು ಕೂಲಂಕುಷವಾಗಿ ಚರ್ಚಿಸಿ, ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಎಲ್ಲಾ ವಿಷಯಗಳ ಬಗ್ಗೆ ಕ್ರಮ ವಹಿಸಲು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಸೂಚಿಸಲಾಯಿತು. ಸಭೆಯಲ್ಲಿ ಪುತ್ತೂರು ಉಪ ವಿಭಾಗದ ಸಹಾಯಕ ಕಮಿಷನರ್, ಪುತ್ತೂರು ಸಹಾಯಕ ಪೊಲೀಸ್ ಅಧೀಕ್ಷಕರು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.





