ಉತ್ತರಾಖಂಡ್ ರಾಷ್ಟ್ರಪತಿ ಆಡಳಿತಕ್ಕೆ ಹೈಕೋರ್ಟ್ ತಡೆ
ಬಹುಮತ ಸಾಬೀತು ಪಡಿಸಲು ಅವಕಾಶ

ಡೆಹ್ರಾಡೂನ್, ಮಾ.29: ಮಾ.31ರಂದು ಉತ್ತರಾಖಂಡ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆ ನಡೆಸುವಂತೆ ನೈನಿತಾಲ್ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ. ಬಿಜೆಪಿಯನ್ನು ಬೆಂಬಲಿಸುತ್ತಿರುವ 9 ಮಂದಿ ಕಾಂಗ್ರೆಸ್ ಬಂಡುಕೋರ ಶಾಸಕರಿಗೂ ಮತದಾನದಲ್ಲಿ ಭಾಗವಹಿಸಲು ಅದು ಅವಕಾಶ ನೀಡಿದೆ.
ರಾಜ್ಯದ ಕಾಂಗ್ರೆಸ್ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ ಕೇಂದ್ರ ಸರಕಾರದ ರವಿವಾರದ ನಿರ್ಧಾರವನ್ನು ಪ್ರಶ್ನಿಸಿ, ಕಾಂಗ್ರೆಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಈ ನಾಟಕೀಯ ಬೆಳವಣಿಗೆ ನಡೆದಿದೆ.
ಗುರುವಾರ ಪೂರ್ವಾಹ್ನ 11 ಗಂಟೆಗೆ ಬಲಾಬಲ ಪರೀಕ್ಷೆ ನಡೆಯಲಿದೆ. ನೈನಿತಾಲ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ವೀಕ್ಷಕರಾಗಿ ಉಪಸ್ಥಿತರಿರುವರು. ಅವರು, ಬಲಾಬಲ ಪರೀಕ್ಷೆಯ ಫಲಿತಾಂಶದ ಬಗ್ಗೆ ಹೈಕೋರ್ಟ್‌ಗೆ ವಿವರ ನೀಡುವರು. ಅದರನುಸಾರ ಹೈಕೋರ್ಟ್ ಈ ಕುರಿತು ಘೋಷಣೆಯೊಂದನ್ನು ಹೊರಡಿಸಲಿದೆ.
ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್‌ರ ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್, ವಿಧಾನಸಭಾಧ್ಯಕ್ಷರು ಅಮಾನ್ಯಗೊಳಿಸಿರುವ ಎಲ್ಲ 9 ಮಂದಿ ಬಂಡುಕೋರ ಶಾಸಕರಿಗೆ ಮತದಾನದಲ್ಲಿ ಭಾಗವಹಿಸುವ ಅವಕಾಶ ನೀಡಲಾಗುವುದೆಂದು ತಿಳಿಸಿದೆ.
ಬಲಪರೀಕ್ಷೆಯ ಫಲಿತಾಂಶವನ್ನು ಎ.1ರಂದು ನ್ಯಾಯಾಲಯದ ಮುಂದಿರಿಸಬೇಕೆಂದು ಅದು ನಿರ್ದೇಶಿಸಿದೆ.
ಎರಡು ದಿನಗಳ ಬಿರುಸಿನ ವಾದ-ಪ್ರತಿವಾದದ ಬಳಿಕ ಹೈಕೋರ್ಟ್‌ನ ಈ ಆದೇಶ ಹೊರಬಿದ್ದಿದೆಯೆಂದು ಕಾಂಗ್ರೆಸ್ ವಕ್ತಾರ ಹಾಗೂ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.
ರಾಷ್ಟ್ರಪತಿ ಆಡಳಿತದ ಹೊರತಾಗಿಯೂ, ಬಲಾಬಲ ಪರೀಕ್ಷೆಗೆ ಅವಕಾಶ ನೀಡುವ ನ್ಯಾಯಾಂಗ ಪರಾಮರ್ಶೆಗೆ ಸಾಕಷ್ಟು ಅವಕಾಶವಿದೆಯೆಂಬ ಅಂಶವನ್ನು ಹೈಕೋರ್ಟ್ ಅಂಗೀಕರಿಸಿದೆ. ಅದನ್ನೇ ತಾವು ಕೇಳಿದ್ದೇವೆಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೇವಲ ‘ಕುದುರೆ ವ್ಯಾಪಾರದ’ ಆರೋಪ ರಾಷ್ಟ್ರಪತಿ ಆಡಳಿತ ಹಾಗೂ ಬಲಾಬಲ ಪರೀಕ್ಷೆಗೆ ತಡೆಯನ್ನು ಸಮರ್ಥಿಸಲಾರದು. ರಾಜ್ಯಪಾಲರು ಮೂರು ಬಾರಿ ಹಾಗೂ ಮುಖ್ಯಮಂತ್ರಿ ಎರಡು ಬಾರಿ ಏನು ಹೇಳಿದ್ದಾರೋ ಅದನ್ನೇ ನ್ಯಾಯಾಲಯ ಅನುಷ್ಠಾನಿಸಿದೆ. ಅದು ಅನರ್ಹ ಶಾಸಕರಿಗೆ ಮತದಾನದಲ್ಲಿ ಭಾಗವಹಿಸಲು ಅವಕಾಶ ನೀಡಿದೆ. ಆದರೆ, ಅವರ ಮತಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದೆಂದು ಸಿಂಘ್ವಿ ವಿವರಿಸಿದ್ದಾರೆ.
ನ್ಯಾಯಾಲಯದ ಆದೇಶದಿಂದ ದಿಗ್ಭ್ರಾಂತಗೊಂಡಿರುವ ಬಿಜೆಪಿ, ಇದು ಕಾಂಗ್ರೆಸ್‌ನ ವಿಜಯವಲ್ಲ ಎಂದಿದ್ದು, ರಾಷ್ಟ್ರಪತಿ ಆಳ್ವಿಕೆಯ ವೇಳೆ ಬಲಾಬಲ ಪರೀಕ್ಷೆಗೆ ಆದೇಶ ನೀಡಿರುವುದು ‘ಅಭೂತಪೂರ್ವ’ ಎಂದು ಬಣ್ಣಿಸಿದೆ.







