ಮಂಗಳೂರು : ವರದಕ್ಷಿಣೆ ಕಿರುಕುಳ- ಪತ್ನಿಯಿಂದ ದೂರು

ಮಂಗಳೂರು, ಮಾ. 29: ಪತಿ ಮತ್ತು ಆತನ ಮನೆಯವರು ಸೇರಿ ವರದಕ್ಷಿಣೆಗೆ ಒತ್ತಾಯಿಸಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುವ ಬಗ್ಗೆ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜೋಕಟ್ಟೆಯ ನಿವಾಸಿ ಎಸ್.ವಿ.ಶೇಖಬ್ಬ ಎಂಬವರ ಪುತ್ರ ಮುಹಮ್ಮದ್ ಮನ್ಸೂರ್(36) ವಿರುದ್ಧ ಆತನ ಪತ್ನಿ ಬಜ್ಪೆಯ ನಿವಾಸಿ ಮುಹಮ್ಮದ್ ಹನೀಫ್ ಎಂಬವರ ಪುತ್ರಿ ನೌಶೀದಾ ಬಾನು (21) ಎಂಬವರು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
2015ರ ಜನವರಿ 26ರಂದು ನೌಶಿದಾ ಬಾನು ಅವರನ್ನು ಮುಹಮ್ಮದ್ ಮನ್ನೂರ್ ಅವರೊಂದಿಗೆ ನಿಖಾ ಮಾಡಿ ಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ 55 ಪವನ್ ಚಿನ್ನ ಮತ್ತು 12 ಪವನ್ ಮಹರ್ ನೀಡಲಾಗಿತ್ತು. ಆದರೆ, ಮದುವೆಯ ಒಂದು ತಿಂಗಳು ಅನ್ಯೋನ್ಯರಾಗಿದ್ದ ದಂಪತಿ ಅನಂತರದ ದಿನಗಳಲ್ಲಿ ಗಂಡನ ಸೇರಿ ಆತನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ನೌಶೀದಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದೀಗ ಗಂಡ ಮನ್ಸೂರ್ ಕೆಲವು ತಿಂಗಳ ಹಿಂದೆ ಗಲ್ಫ್ ರಾಷ್ಟ್ರಕ್ಕೆ ಹೋಗಿದ್ದು, ಅದಕ್ಕಿಂತ ಮುಂಚೆ ಹೆಂಡತಿಗೆ ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ. ಇದಕ್ಕೆ ಮಾವ ಶೇಖಬ್ಬ, ಅತ್ತೆ ಖತೀಜಾಮತ್ತು ನಾದಿನಿಯರಾದ ರುಖಿಯ್ಯೆ ಮತ್ತು ಸಕೀನಾ ಎಂಬವರು ಸಾಥ್ ನೀಡಿದ್ದು, ಇವರೆಲ್ಲರೂ ಸೇರಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ಮನ್ಸೂರ್ ನೌಶೀದಾ ಮೇಲೆ ದೈಹಿಕ ಹಲ್ಲೆ ನಡೆಸಿದ್ದು, ವರದಕ್ಷಿಣೆ ತರದಿದ್ದರೆ ತಿಲಾಕ್ ನೀಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಗಂಡ, ಅತ್ತೆ, ಮಾವ ಮತ್ತು ನಾದಿನಿಯರ ಕಿರುಕುಳ ಮತ್ತು ನೀಡುತ್ತಿದ್ದ ಮಾನಸಿಕ ಹಿಂಸೆಯನ್ನು ತಾಳಲಾರದೆ ನೌಶೀದಾ ಪದೇ ಪದೇ ತವರು ಮನೆಗೆ ಬಂದು ತಂದೆಯಲ್ಲಿ ದೂರುತಿದ್ದರೆನ್ನಲಾಗಿದೆ. ಆದರೆ, ಕಳೆದ ಶುಕ್ರವಾರ ನೌಶೀದಾ ಬಜ್ಪೆ ಠಾಣೆಗೆ ತೆರಳಿ ಗಂಡ ಮತ್ತು ಗಂಡನ ಮನೆಯವರ ವಿರುದ್ಧ ದೂರು ನೀಡಿ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





