ಪೊಲೀಸ್ ಸಿಬ್ಬಂದಿಗೆ ತಂಡದಿಂದ ಹಲ್ಲೆ
ಜಮೀನು ವಿವಾದ
ಸೊರಬ, ಮಾ.29: ಜಮೀನಿನ ವಿವಾದಕ್ಕೆ ಸಂಬಂಧಿಸಿದ ದೂರು ಬಂದ ಹಿನ್ನೆಲೆಯಲ್ಲಿ, ಸ್ಥಳ ಪರಿಶೀಲನೆಗೆ ತೆರಳಿದ್ದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಆರು ಜನರ ತಂಡವೊಂದು ಹಲ್ಲೆ ನಡೆಸಿದ ಘಟನೆ ಮಂಗಳವಾರ ತಾಲೂಕಿನ ಬಿದರಗೇರಿ ಗ್ರಾಮದಲ್ಲಿ ನಡೆದಿದೆ. ಬಿದರಗೇರಿ ಗ್ರಾಮದ ಛತ್ರಪತಿ ಎಂಬವರು ತಮ್ಮ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ದೂರನ್ನು ದಾಖಲಿಸಿದ್ದರು. ಈ ಸಂಬಂಧ ಪಂಚರ ಸಮಕ್ಷಮದಲ್ಲಿ ಸ್ಥಳ ಪರಿಶೀಲನೆಗೆ ತೆರಳಿದ ಪಿಎಸ್ಸೈ ಸುನೀಲ್ ಕುಮಾರ್ ಸೇರಿದಂತೆ ನಾಲ್ಕು ಜನ ಪೊಲೀಸ್ ಸಿಬ್ಬಂದಿ ಮೇಲೆ ನಿಂಗಪ್ಪ, ಚಂದ್ರಶೇಖರ್, ದ್ಯಾವಪ್ಪ, ಗಿರೀಶ್, ಕೆರಿಯಪ್ಪ ಹಾಗೂ ಜ್ಞಾನೇಶ್ ಎಂಬ ಆರು ಮಂದಿಯ ತಂಡ ಕರ್ತವ್ಯ ನಿರತ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸ್ ಸಿಬ್ಬಂದಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ನಿಂಗಪ್ಪ, ಚಂದ್ರಶೇಖರ್, ಗಿರೀಶ್ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆ ಮರೆಸಿಕೊಂಡ ಮೂರು ಜನ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.





