ಬಗೆ ಹರಿಯದ ಗೋವಾ ಕನ್ನಡಿಗರ ಸಮಸೆ್ಯ
ಕಲಿಕೆ ಗೋವಾದಲ್ಲಿ ಪರೀಕ್ಷೆ ಕರ್ನಾಟಕದಲ್ಲಿ
-ಶ್ರೀನಿವಾಸ ಬಾಡಕರ
ಕಾರವಾರ, ಮಾ.29: ಕೊಂಕಣಿ(ಗೋವಾ) ರಾಜ್ಯದಲ್ಲಿ ವ್ಯಾಸಂಗ ಮಾಡುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಎಸೆಸೆಲ್ಸಿ ಅಂತಿಮ ಪರೀಕ್ಷೆ ಬರೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದಾಗಿ ಗೋವಾದಲ್ಲಿ ನೆಲೆಸಿರುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಕಾರವಾರದ ಉಳಗಾದ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕಾದ ಸ್ಥಿತಿ ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಗೋವಾ ರಾಜ್ಯ ಸರಕಾರ ಪ್ರಾಥಮಿಕ ಹಂತದವರೆಗೆ ಕನ್ನಡ ಮಾಧ್ಯಮ ಕಲಿಕೆಗೆ ಎಲ್ಲ ರೀತಿಯ ಅವಕಾಶ ಕಲ್ಪಿಸಿದೆ. ಆದರೆ ಪ್ರೌಢ ಶಿಕ್ಷಣಕ್ಕೆ ಮೂಲಭೂತವಾಗಿ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದರೂ ಪರೀಕ್ಷೆಗಾಗಿ ಮಾತ್ರ ಕನ್ನಡಿಗರು ಕರ್ನಾಟಕವನ್ನು ಅವಲಂಬಿಸಬೇಕಾದ ಸ್ಥಿತಿಯಿಂದ ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡದ ನಡುವೆ ಅನೇಕ ಕಷ್ಟಗಳನ್ನು ಅನುಭವಿಸಬೇಕಾಗಿದೆ. ಜೀವನ ನಿರ್ವಹಣೆಗಾಗಿ ಗೋವಾ ರಾಜ್ಯಕ್ಕೆ ತೆರಳಿ ಅಲ್ಲಿ ವಾಸ್ತವ್ಯ ಮಾಡಿರುವ ಉತ್ತರ ಕರ್ನಾಟಕದ ಕನ್ನಡಿಗರು ಕನ್ನಡ ಮಾಧ್ಯಮದಲ್ಲಿಯೇ ಓದಿಸಿ ಪರೀಕ್ಷೆಯನ್ನು ಬರೆಯಲು ಪ್ರೋತ್ಸಾಹಿಸುತ್ತಿದ್ದಾರೆ. ಪರೀಕ್ಷೆಗೆ ಒಟ್ಟು 77 ವಿದ್ಯಾರ್ಥಿಗಳ ಆಗಮನ: ಈ ಬಾರಿ ಎರಡು ಕೇಂದ್ರದಿಂದ ಒಟ್ಟು 77 (37ಬಾಲಕಿಯರು, 40 ಬಾಲಕರು) ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯನ್ನು ಬರೆಯಲಿದ್ದಾರೆ. ಎಸ್‌ವೈಎಸ್‌ಎಂ ಬೈನಾ ಕೇಂದ್ರದಿಂದ 21 ವಿದ್ಯಾರ್ಥಿಗಳು ಹಾಗೂ ಎಸ್‌ವೈಎಸ್‌ಎಂ ಝರಿ ಕೇಂದ್ರದಿಂದ 56 ವಿದ್ಯಾರ್ಥಿಗಳಿದ್ದು, ಎಲ್ಲರೂ ಕಾರವಾರದ ಉಳಗಾದ ಶಿವಾಜಿ ಎಜುಕೇಶನ್‌ಸೊಸೈಟಿಗೆ ಆಗಮಿಸಿದ್ದಾರೆ. ದೂರದಿಂದ ಬಂದ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಕಾಲೇಜು ಆಡಳಿತ ಮಂಡಳಿಯೇ ತಮ್ಮ ವಸತಿ ನಿಲಯದಲ್ಲಿ ವ್ಯವಸ್ಥೆ ಮಾಡಿದ್ದಾರೆ. ಬಾಲಕರಿಗೆ ಒಂದು ಪ್ರತ್ಯೇಕವಾಗಿ ವ್ಯವಸ್ಥೆಯನ್ನು ಮಾಡಿದ್ದಾರೆ. ವಿದ್ಯಾರ್ಥಿಗಳ ಊಟೋಪಚಾರಕ್ಕೆ ತಗಲುವ ಖರ್ಚು ವೆಚ್ಚವನ್ನು ಉಳಗಾ ಕಾಲೇಜಿನವರೇ ಭರಿಸಲಿದ್ದಾರೆ. ಅದೇ ರೀತಿ ಪರೀಕ್ಷೆಗಾಗಿ ಬಂದ ಬರುವ ಎಲ್ಲ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡ ಕಾಳಜಿಯನ್ನು ವಹಿಸಿದ್ದಾರೆ.
ಕಲಿಕೆ ಗೋವಾದಲ್ಲಿ ಪಠ್ಯ ಕರ್ನಾಟಕದ್ದು: ಗೋವಾದ ವಾಸ್ಕೋ ಜಿಲ್ಲೆಯ ಎಸ್‌ವೈಎಸ್‌ಎಂ ಬೈನಾ ಮತ್ತು ಜುವಾರಿನಗರದಲ್ಲಿಯ ಝರಿ ಎಂಬಲ್ಲಿ ಎರಡು ಪ್ರೌಢ ಶಾಲೆಗಳು ಕಳೆದ 22 ವರ್ಷಗಳಿಂದ ನಡೆಯುತ್ತಿವೆ. ಪ್ರೌಢ ಹಂತದ ಪಠ್ಯಕ್ರಮಗಳು ಕರ್ನಾಟಕ ಮಾದರಿಯಲ್ಲಿವೆ. ಹಾಗಾಗಿ ಈ ಮಕ್ಕಳು ಎಸೆಸೆಲ್ಸಿ ಪರೀಕ್ಷೆಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುತ್ತಿರುವುದರಿಂದ ಪರೀಕ್ಷಾ ಕೇಂದ್ರ ಗೋವಾದಲ್ಲಿ ತೆರೆಯದೆ ಇರುವುದಕ್ಕೆ ಕಾರಣವಾಗಿದ್ದು ವಿದ್ಯಾರ್ಥಿಗಳು ಕಾರವಾರಕ್ಕೆ ಬರಬೇಕಾಗಿದೆ.
ಪರೀಕ್ಷಾ ಕೇಂದ್ರ ತೆರೆಯಲಿ: ಗೋವಾದಲ್ಲೇ ಪರೀಕ್ಷಾ ಕೇಂದ್ರವನ್ನು ತೆರೆಯಬೇಕು ಎಂಬ ಗೋವಾ ಕನ್ನಡಿಗರ ಕೂಗು ಹಲವು ವರ್ಷಗಳಿಂದ ಹಾಗೇ ಉಳಿದುಕೊಂಡಿದೆ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕನ್ನಡದಲ್ಲಿ ಪರೀಕ್ಷೆ ಬರೆಯುವ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳನ್ನು ತೆರೆಯಬೇಕು ಎನ್ನುವುದು ವಿದ್ಯಾರ್ಥಿಗಳ ಆಗ್ರಹವಾಗಿದೆ.







