ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಮೃತದೇಹ ಪತ್ತೆ
ಪತಿಯಿಂದಲೇ ಕೊಲೆ:ಶಂಕೆ ಉದ್ರಿಕ್ತರಿಂದ ಮನೆ, ವಾಹನ, ಹುಲ್ಲಿನ ಮೆದೆಗೆ ಬೆಂಕಿ
ಕೃಷ್ಣರಾಜಪೇಟೆ, ಮಾ. 29: ಮಹಿಳೆಯನ್ನು ಕೊಲೆ ಮಾಡಿ ನೇಣುಬಿಗಿದಿರುವ ಘಟನೆ ತಾಲೂಕಿನ ನಾಡಭೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಡಭೋಗನಹಳ್ಳಿಯ ಮಂಜಪ್ಪ ಎಂಬವರ ಮಗ ಮಂಜುನಾಥ (34) ಎಂಬಾತನ ಪತ್ನಿ ಪ್ರಿಯಾಂಕಾ(25) ಕೊಲೆಯಾದವರು.ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ದುಡುಕನಹಳ್ಳಿ ಗ್ರಾಮದ ತಮ್ಮಯ್ಯಪ್ಪ-ಮಣಿ ದಂಪತಿಯ ಪುತ್ರಿ ಪ್ರಿಯಾಂಕಾರನ್ನು ಕಳೆದ 5 ವರ್ಷಗಳ ಹಿಂದೆ ಸಾಕಷ್ಟು ವರದಕ್ಷಿಣೆ ನೀಡಿ ಮಂಜುನಾಥನಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಮಂಜುನಾಥ ಇನ್ನಷ್ಟು ವರದಕ್ಷಿಣೆ ತರುವಂತೆ ಪ್ರಿಯಾಂಕಾಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಗ್ರಾಮದಲ್ಲಿ ಹಲವಾರು ಬಾರಿ ರಾಜಿ ಪಂಚಾಯಿತಿ ನಡೆದಿದ್ದರೂ ಮಂಜುನಾಥನ ಚಿಕ್ಕಪ್ಪಪುಟ್ಟರಾಜು, ಚಿಕ್ಕಮ್ಮ ಮಂಜುಳಾ ಎಂಬವರು ಸೇರಿಕೊಂಡು ವಾರದೊಳಗೆ ವರದಕ್ಷಿಣೆ ತರದಿದ್ದರೆ ಮಂಜುನಾಥನಿಗೆ ಬೇರೆ ಮದುವೆ ಮಾಡುವುದಾಗಿ ಎಚ್ಚರಿಕೆ ನೀಡಿ ಮಂಗಳವಾರದ ಗಡುವು ನೀಡಿದ್ದರು.
ಆದರೆ ಇಂದು ಮುಂಜಾನೆ ಮಂಜುನಾಥ ತನ್ನ ಚಿಕ್ಕಪ್ಪ, ಚಿಕ್ಕಮ್ಮರ ಸಹಾಯದಿಂದ ಪ್ರಿಯಾಂಕಾರನ್ನು ಉಸಿರುಗಟ್ಟಿಸಿ ಕೊಲೆಮಾಡಿ ಆನಂತರ ಕೈಕಾಲುಗಳನ್ನು ಕಟ್ಟಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಂತೆ ನಂಬಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಕೊಲೆ ಮಾಡಿದ ಬಳಿಕ ಮೂವರೂ ಗ್ರಾಮದಿಂದ ಪರಾರಿಯಾಗಲು ಯತ್ನಿಸಿದ್ದು, ಅನುಮಾನಗೊಂಡ ಗ್ರಾಮಸ್ಥರು ಮೂವರನ್ನು ತಡೆದು ವಿಚಾರಿಸಿದಾಗ ಪ್ರಿಯಾಂಕಾರನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ ಗ್ರಾಮಕ್ಕೆ ತಲುಪಿದ ಪ್ರಿಯಾಂಕಾರ ಪೋಷಕರು ಮಗಳ ಸಾವಿನಿಂದ ರೊಚ್ಚಿಗೆದ್ದು ಅಳಿಯ ಮಂಜುನಾಥ, ಬೀಗರಾದ ಪುಟ್ಟರಾಜು, ಮಂಜುಳಾಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆಗೆ ಸ್ಥಳಕ್ಕೆ ಬಂದ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಮೂವರನ್ನು ರಕ್ಷಿಸಿ ಮನೆಯ ಕೊಠಡಿಯಲ್ಲಿ ಕೂಡಿ ಹಾಕಿದರು.
ಪ್ರಿಯಾಂಕಾರ ಸಾವಿನಿಂದ ಆಕ್ರೋಶಿತರಾದ ಸಂಬಂಧಿಕರು ಮಂಜುನಾಥನ ಮನೆಯ ಆವರಣದಲ್ಲಿದ್ದ ಎತ್ತಿನಗಾಡಿ, ದ್ವಿಚಕ್ರವಾಹನ ಹಾಗೂ ಹುಲ್ಲಿನ ಮೆದೆಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸ್ ಪಡೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸುಧೀಂದ್ರ ಕುಮಾರ್ ರೆಡ್ಡಿ, ಎಎಸ್ಪಿ ಶಿವಮಾದಪ್ಪ, ನಾಗಮಂಗಲ ಡಿವೈಎಸ್ಪಿ ಜನಾರ್ದನ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ನೇಣು ಬಿಗಿದ ಸ್ಥಿತಿಯಲ್ಲಿದ್ದ ಪ್ರಿಯಾಂಕಾರ ಮೃತದೇಹವನ್ನು ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಮಕ್ಷಮದಲ್ಲಿ ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಹಲ್ಲೆಗೊಳಗಾದ ಆರೋಪಿಗಳಾದ ಮಂಜುನಾಥ, ಪುಟ್ಟರಾಜು ಹಾಗೂ ಮಂಜುಳಾರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಬಿಗಿ ಭದ್ರತೆಯಲ್ಲಿ ಮೈಸೂರಿಗೆ ಕರೆದೊಯ್ಯಲಾಯಿತು. ಪ್ರಿಯಾಂಕಾರ ಮಾವ ಮಂಜಪ್ಪ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.







